ಪಾಕಿಸ್ತಾನ | ಇಮ್ರಾನ್ ಖಾನ್ ಎಲ್ಲಿದ್ದಾರೆ?: ಸಾವಿನ ವದಂತಿಗಳ ಕುರಿತು ಆಡಿಯಾಲ ಜೈಲಿನ ಅಧಿಕಾರಿಗಳು ಹೇಳಿದ್ದೇನು?

ಇಮ್ರಾನ್ ಖಾನ್ | Photo Credit : PTI
ಇಸ್ಲಾಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಯ ಕುರಿತು ಹಬ್ಬಿರುವ ವದಂತಿಗಳನ್ನು ಬುಧವಾರ ಅಲ್ಲಗಳೆದಿರುವ ಆಡಿಯಾಲ ಜೈಲಿನ ಅಧಿಕಾರಿಗಳು ಇಮ್ರಾನ್ ಖಾನ್ ರನ್ನು ಆಡಿಯಾಲ ಜೈಲಿನಿಂದ ಸ್ಥಳಾಂತರಿಸಲಾಗಿದೆ ಹಾಗೂ ಆವರು ಆರೋಗ್ಯಕರವಾಗಿದ್ದು, ಅವರ ಸಾವಿನ ಕುರಿತು ಹರಡಿರುವ ವದಂತಿಗಳು ನಿರಾಧಾರ ಎಂದು ಸ್ಪಷ್ಟನೆ ನೀಡಿದೆ.
“ಅವರು ಸಂಪೂರ್ಣ ಆರೋಗ್ಯವಾಗಿದ್ದು, ಅವರು ಪೂರ್ಣಪ್ರಮಾಣದ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ” ಎಂದು ಆಡಿಯಾಲ ಜೈಲು ಸಿಬ್ಬಂದಿಗಳು ತಿಳಿಸಿದ್ದಾರೆ.
ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಯ ಕುರಿತು ಹಬ್ಬಿರುವ ವದಂತಿಗಳ ಕುರಿತು ಸರಕಾರ ಅಧಿಕೃತ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್ ಇ-ಇನ್ಸಾಫ್ ಪಕ್ಷ, ಇಮ್ರಾನ್ ಖಾನ್ ಹಾಗೂ ಅವರ ಕುಟುಂಬದ ಸದಸ್ಯರ ನಡುವೆ ತಕ್ಷಣವೇ ಸಭೆಯೊಂದನ್ನು ಏರ್ಪಡಿಸಬೇಕು ಎಂದೂ ಒತ್ತಾಯಿಸಿದೆ ಎಂದು Dawn ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವಾರ ಆಡಿಯಾಲ ಜೈಲಿನ ಹೊರಗೆ ತಮ್ಮ ಮೇಲೆ ಹಾಗೂ ಇಮ್ರಾನ್ ಖಾನ್ ಬೆಂಬಲಿಗರ ಮೇಲೆ ಪೊಲೀಸರು ನಡೆಸಿದ ಅಮಾನುಷ ಹಲ್ಲೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಇಮ್ರಾನ್ ಖಾನ್ ಸಹೋದರಿಯರು ಆಗ್ರಹಿಸಿದಾಗಿನಿಂದ, ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಊಹಾಪೋಹಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಆಡಿಯಾಲ ಜೈಲು ಆಡಳಿತದಿಂದ ಈ ಸ್ಪಷ್ಟನೆ ಹೊರ ಬಿದ್ದಿದೆ.







