ಆಳಂದ ಮತಗಳವು ಪ್ರಕರಣ : ಪಶ್ಚಿಮ ಬಂಗಾಳದಲ್ಲಿ ಓರ್ವನ ಬಂಧನ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳವು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಓರ್ವನನ್ನು ಬಂಧಿಸಿದೆ. ಇದು ಪ್ರಕರಣಕ್ಕೆ ಸಂಬಂಧಿಸಿ ನಡೆದ ಮೊದಲ ಬಂಧನವಾಗಿದೆ.
ಸೆಪ್ಟೆಂಬರ್ 18ರಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಲ್ಲೇಖಿಸಿದ ಎರಡು ಕ್ಷೇತ್ರಗಳಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಕೂಡ ಒಂದು. ಆಳಂದದಲ್ಲಿ ಚುನಾವಣಾ ವಂಚನೆ ಮತ್ತು ಮತಗಳ ಕಳ್ಳತನ ನಡೆದಿರುವ ಬಗ್ಗೆ ರಾಹುಲ್ ಗಾಂಧಿ ಆರೋಪಿಸಿದ್ದರು.
ಬಾಪಿ ಆದ್ಯ ಎಂಬಾತನನ್ನು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಘುಗುರಗಚ್ಚಿ ಹಂಸ್ಕಲಿ ಪ್ರದೇಶದಿಂದ ಬಂಧಿಸಿ ಬೆಂಗಳೂರಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ 12 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಬಂಧಿತ ವ್ಯಕ್ತಿಯಿಂದ ಪೊಲೀಸರು ಹಲವು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Next Story





