ಕದಿಯಲು ಬಂದ ಮನೆಯಲ್ಲಿ ಏನೂ ಸಿಗದ ಹತಾಶೆಯಲ್ಲಿ ರೂ. 500 ರ ನೋಟು ಇಟ್ಟು ಹೋದ ಕಳ್ಳರು!

ಹೊಸದಿಲ್ಲಿ: ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ನಿವಾಸದಲ್ಲಿ ಕಳವು ಮಾಡಲು ಯಾವುದೇ ಬೆಲೆ ಬಾಳುವ ವಸ್ತು ದೊರೆಯದೆ ಹತಾಶಗೊಂಡಿರುವ ಕಳ್ಳರ ಗುಂಪೊಂದು, ಮನೆಯಿಂದ ಹೊರ ಹೋಗುವಾಗ ಅವರ ಮನೆಯ ಬಾಗಿಲಿನ ಮುಂದೆ ರೂ. 500 ಮುಖಬಲೆಯ ನೋಟನ್ನು ಬಿಟ್ಟು ಹೋಗಿರುವ ಘಟನೆ ರೋಹಿಣಿಯಲ್ಲಿ ನಡೆದಿದೆ ಎಂದು timesofindia.com ವರದಿ ಮಾಡಿದೆ.
ಪೊಲೀಸರ ಪ್ರಕಾರ, ರೋಹಿಣಿಯ ಸೆಕ್ಟರ್ 8ರಲ್ಲಿನ ನಿವಾಸವೊಂದರಲ್ಲಿ ಕಳುವಾಗಿರುವ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಉತ್ತರ ರೋಹಿಣಿ ಪೊಲೀಸ್ ಠಾಣೆಯ ಪೊಲೀಸ್ ತಂಡವು, ಅಲ್ಲಿ 80 ವರ್ಷದ ದೂರುದಾರನ್ನು ಭೇಟಿ ಮಾಡಿದೆ. ನಾನು ಹಾಗೂ ನನ್ನ ಪತ್ನಿ ಗುರ್‌ಗಾಂವ್‌ನಲ್ಲಿ ವಾಸಿಸುತ್ತಿರುವ ನಮ್ಮ ಪುತ್ರನ ಮನೆಗೆ ಜುಲೈ 19ರಂದು ಬೆಳಗ್ಗೆ ಸುಮಾರು 8 ಗಂಟೆಗೆ ತೆರಳಿದ್ದೆವು ಎಂದು ದೂರುದಾರರು ಅವರಿಗೆ ತಿಳಿಸಿದ್ದಾರೆ.
ಶುಕ್ರವಾರದಂದು ನಿಮ್ಮ ಮನೆ ಬಾಗಿಲು ಮುರಿದಿದೆ ಎಂದು ನೆರೆಮನೆಯವರು ದೂರುದಾರರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಮನೆಗೆ ಮರಳಿದಾಗ ಮುಖ್ಯ ದ್ವಾರದ ಬೀಗ ಮಾತ್ರ ಮುರಿದಿದ್ದು, ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಇರಿಸದೆ ಇದ್ದುದರಿಂದ ಮನೆಯಿಂದ ಯಾವ ವಸ್ತುವೂ ಕಾಣೆಯಾಗಿಲ್ಲದಿರುವುದು ದೂರುದಾರರ ಗಮನಕ್ಕೆ ಬಂದಿದೆ.
ಮನೆಯೊಳಗಿನ ಅಲ್ಮೆರಾಗಳೂ ಭದ್ರವಾಗಿದ್ದವು. ಮನೆಯಿಂದ ಏನೂ ಕಳುವಾಗದಿದ್ದರೂ, ನನಗೆ ರೂ. 500 ಮುಖಬೆಲೆಯ ನೋಟು ದೊರೆಯಿತು ಎಂದೂ ಅವರು ವರದಿ ಮಾಡಿದ್ದಾರೆ.
ಇದಕ್ಕೂ ಮುನ್ನ, ಜೂನ್ ತಿಂಗಳಲ್ಲಿ ದಂಪತಿಗಳಿಬ್ಬರನ್ನು ದರೋಡೆ ಮಾಡಲು ಯತ್ನಿಸಿದ್ದ ದರೋಡೆಕೋರರು, ಅವರ ಬಳಿ ಕೇವಲ ರೂ. 20 ದೊರೆತಿದ್ದರಿಂದ, ಅವರ ಕೈಗೇ ರೂ. 100ರ ನೋಟು ಇಟ್ಟಿದ್ದ ಘಟನೆ ನಡೆದಿತ್ತು. ಈ ಘಟನೆಯ ದೃಶ್ಯವು ಪೂರ್ವ ದಿಲ್ಲಿಯ ಶಹ್ದಾರದಲ್ಲಿನ ಫರ್ಶ್ ಬಝಾರ್ ಪ್ರದೇಶದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆ ದೃಶ್ಯದಲ್ಲಿ ದಂಪತಿಗಳ ಬಳಿ ಏನೂ ದೊರೆಯದಿದ್ದರಿಂದ ದರೋಡೆಕೋರರೇ ಆ ದಂಪತಿಗಳ ಕೈಗೆ ರೂ. 100 ಮುಖಬೆಲೆಯ ನೋಟನ್ನು ಇಟ್ಟು, ನಂತರ ಸ್ಥಳದಿಂದ ಪರಾರಿಯಾಗಿದ್ದದ್ದು ಸೆರೆಯಾಗಿತ್ತು.
ಕನಿಷ್ಠ 200 ಕ್ಯಾಮೆರಾಗಳಿಂದ ಆ ದೃಶ್ಯದ ತುಣುಕನ್ನು ಪರೀಕ್ಷಿಸಿದ್ದ ಪೊಲೀಸರು, ನಂತರ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದರು.







