ಖಾಲಿಸ್ತಾನಿ ಭಯೋತ್ಪಾದಕ ನಿಜ್ಜರ್ ನನ್ನು ಹತ್ಯೆ ಮಾಡಿರುವುದಾಗಿ ಗೋಲ್ಡಿ ಬ್ರಾರ್ ಹೇಳಿಕೊಂಡಿದ್ದಾನೆ ಎನ್ನಲಾದ ಆಡಿಯೊ ಸೋರಿಕೆ

ಗೋಲ್ಡಿ ಬ್ರಾರ್ | ನಿಜ್ಜರ್ Photo: x.com/ndtv
ಹೊಸದಿಲ್ಲಿ: ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ತಾನೇ ಹತ್ಯೆ ಮಾಡಿರುವುದಾಗಿ ಕೆನಡಾ ಮೂಲದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಹೇಳಿಕೊಂಡಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್ ಸೋರಿಕೆಯಾಗಿದೆ.
2023ರಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದ ಹೊರಗೆ ಅಪರಿಚಿತ ಬಂದೂಕುಧಾರಿಗಳು ನಿಜ್ಜರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಘಟನೆ ಭಾರತ ಮತ್ತು ಕೆನಡಾ ನಡುವಿನ ಅತ್ಯಂತ ಕೆಟ್ಟ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು.
ಭಾರತದಲ್ಲಿ ಗಾಯಕ–ಗೀತರಚನಾಕಾರ ಸಿಧು ಮೂಸೆವಾಲಾ ಸೇರಿದಂತೆ ಹಲವು ಕೊಲೆ ಪ್ರಕರಣಗಳಲ್ಲಿ ಬೇಕಾಗಿರುವ ಬ್ರಾರ್, ನಿಜ್ಜರ್ ಯುವಕರನ್ನು ಮಾದಕ ವಸ್ತುಗಳ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದ ಕಾರಣಕ್ಕೆ ಆತನನ್ನು ಕೊಂದಿರುವುದಾಗಿ ಆಡಿಯೊದಲ್ಲಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಖಾಲಿಸ್ತಾನಿ ಭಯೋತ್ಪಾದಕ ಪರಮಜಿತ್ ಸಿಂಗ್ ಪಮ್ಮಾ ನೊಂದಿಗೆ ನಡೆದ ಸಂಭಾಷಣೆಯಲ್ಲಿ ಬ್ರಾರ್ ಈ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
‘16ರಿಂದ 17 ವರ್ಷ ವಯಸ್ಸಿನ ಯುವಕರನ್ನು ಮಾದಕ ವಸ್ತುಗಳ ಮಾರಾಟಕ್ಕೆ ಮತ್ತು ಮಾಹಿತಿದಾರರಾಗಿ ಬಳಸಿಕೊಳ್ಳಲಾಗುತ್ತಿತ್ತು. ಅಗತ್ಯವಿದ್ದಾಗ ಈ ಯುವಕರನ್ನು ಬಳಸಿಕೊಳ್ಳಲಾಗುತ್ತಿತ್ತು’ ಎಂದು ಬ್ರಾರ್ ಹೇಳಿದ್ದಾರೆ ಎನ್ನಲಾಗಿದೆ.
‘ಅದಕ್ಕಾಗಿಯೇ ನನ್ನ ತಂಡ ಮತ್ತು ನಾನು ನಿಜ್ಜರ್ ನನ್ನು ಕೊಲ್ಲಬೇಕಾಯಿತು. ಈ ಜನರು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯುವಕರನ್ನು ಬಳಸುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ಕೃತ್ಯಗಳ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಬ್ರಾರ್ ಹೇಳಿದ್ದಾನೆ ಎನ್ನಲಾಗಿದೆ.
ಟ್ರುಡೊ ಆರೋಪ
ನಿಜ್ಜರ್ ಹತ್ಯೆಯಾದ ಕೆಲ ವಾರಗಳ ಬಳಿಕ ಕೆನಡಾದ ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೊ, ಹತ್ಯೆಯಲ್ಲಿ ಭಾರತದ ಕೈವಾಡವಿರುವ ಸಾಧ್ಯತೆಯ ಬಗ್ಗೆ ಆರೋಪಿಸಿದ್ದರು.
ಭಾರತವು ಈ ಆರೋಪವನ್ನು ‘ಅಸಂಬದ್ಧ’ ಎಂದು ತಳ್ಳಿಹಾಕಿತ್ತು. ಖಾಲಿಸ್ತಾನಿ ಪರ ಶಕ್ತಿಗಳು ಕೆನಡಾ ನೆಲದಿಂದ ಕಾರ್ಯನಿರ್ವಹಿಸಲು ಸರಕಾರ ಅವಕಾಶ ನೀಡುತ್ತಿದೆ ಎಂದು ಭಾರತ ಆರೋಪಿಸಿತ್ತು.
ಈ ಆರೋಪಗಳ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು. ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ ಬಳಿಕ, ಭಾರತವು ತನ್ನ ಹೈಕಮಿಷನರ್ ಸೇರಿದಂತೆ ಹಲವು ರಾಜತಾಂತ್ರಿಕರನ್ನು ಕೆನಡಾದಿಂದ ವಾಪಸ್ ಕರೆಸಿಕೊಂಡಿತ್ತು.
ಕೆನಡಾದ ಸಂಸತ್ ಚುನಾವಣೆಯಲ್ಲಿ ಲಿಬರಲ್ ಪಕ್ಷದ ನಾಯಕ ಮಾರ್ಕ್ ಕಾರ್ನಿ ಗೆದ್ದು, ಟ್ರುಡೊ ಅಧಿಕಾರದಿಂದ ಕೆಳಗಿಳಿದ ಬಳಿಕ ಉಭಯ ದೇಶಗಳ ಸಂಬಂಧದಲ್ಲಿ ನಿಧಾನವಾಗಿ ಸುಧಾರಣೆ ಕಾಣಿಸಿಕೊಳ್ಳತೊಡಗಿತ್ತು.
‘ಭಾರತೀಯ ಅಧಿಕಾರಿಗಳ ವಿರುದ್ಧ ಪುರಾವೆ ಇಲ್ಲ’
ಕಳೆದ ತಿಂಗಳು ಕೆನಡಾದ ತನಿಖಾಧಿಕಾರಿಗಳು ನಿಜ್ಜರ್ ಹತ್ಯೆಯನ್ನು ಭಾರತದೊಂದಿಗೆ ಸಂಪರ್ಕಿಸುವ ಯಾವುದೇ ಪುರಾವೆ ಕಂಡುಬಂದಿಲ್ಲ ಎಂದು ಹೇಳಿದ್ದರು.
‘ಈ ಸಂಘಟಿತ ಅಪರಾಧ ತನಿಖೆ, ಆರೋಪಗಳು ಮತ್ತು ಆರೋಪಪಟ್ಟಿಯಲ್ಲಿ ಭಾರತೀಯ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಲಾಗಿದೆ ಅಥವಾ ಅವರು ಭಾಗಿಯಾಗಿದ್ದಾರೆ ಎಂಬುದನ್ನು ಸೂಚಿಸುವ ಯಾವುದೇ ಪುರಾವೆ ಇಲ್ಲ’ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಉಪ ಆಯುಕ್ತೆ ಲಿಸಾ ಮೋರ್ಲ್ಯಾಂಡ್ PTIಗೆ ತಿಳಿಸಿದ್ದರು.
ಟ್ರುಡೊ ಅವರ ಆರೋಪಗಳ ಕುರಿತು ಕೇಳಲಾದ ನಿರ್ದಿಷ್ಟ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದರು.
ಬಿಷ್ಣೋಯ್–ಬ್ರಾರ್ ನಂಟು
ಲಾರೆನ್ಸ್ ಬಿಷ್ಣೋಯ್ 2015ರಿಂದ ಜೈಲಿನಲ್ಲಿದ್ದಾನೆ. ಭಾರತ ಮತ್ತು ವಿದೇಶಗಳಲ್ಲಿ ನಡೆದ ಹಲವು ಅಪರಾಧಗಳಲ್ಲಿ ಬಿಷ್ಣೋಯ್ ಮತ್ತು ಬ್ರಾರ್ ಸಹಚರರಾಗಿದ್ದರು. ಆದರೆ, ಕಳೆದ ವರ್ಷ ಇಬ್ಬರೂ ಪರಸ್ಪರ ಬೇರೆಯಾಗಿದ್ದಾರೆ ಎಂದು ವರದಿಯಾಗಿತ್ತು.
ಬ್ರಾರ್ ಬಂಧನಕ್ಕೆ 50,000 ಡಾಲರ್ ಬಹುಮಾನ
ಗೋಲ್ಡಿ ಬ್ರಾರ್ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡುವವರಿಗೆ ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (FBI) ಕಳೆದ ತಿಂಗಳು 50,000 ಡಾಲರ್ ವರೆಗೆ ಬಹುಮಾನ ಘೋಷಿಸಿತ್ತು.
‘ದಕ್ಷಿಣ ಕ್ಯಾಲಿಫೋರ್ನಿಯಾ ಹಾಗೂ ಅಮೆರಿಕ ಮತ್ತು ಕೆನಡಾದಾದ್ಯಂತ ವಿವಿಧ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಸಂಘಟಿತ ಅಪರಾಧ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಸತೀಂದರ್ಜೀತ್ ಸಿಂಗ್ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡುವವರಿಗೆ 50,000 ಡಾಲರ್ವರೆಗೆ ಬಹುಮಾನ ನೀಡಲಾಗುವುದು’ ಎಂದು FBI ತನ್ನ X ಪೋಸ್ಟ್ನಲ್ಲಿ ತಿಳಿಸಿತ್ತು.
ಸತೀಂದರ್ಜೀತ್ ಸಿಂಗ್ ಎಂಬುದು ಗೋಲ್ಡಿ ಬ್ರಾರ್ನ ನಿಜವಾದ ಹೆಸರು ಎಂದು FBI ಉಲ್ಲೇಖಿಸಿದೆ.






