'ಸರಕಾರವನ್ನು ಮನಮೋಹನ್ ಸಿಂಗ್ ನಡೆಸಿದರು, ಪಕ್ಷವನ್ನು ನಾನು ಮುನ್ನಡೆಸಿದೆ': ಆತ್ಮಚರಿತ್ರೆಯಲ್ಲಿ ಸೋನಿಯಾ ಗಾಂಧಿ ಉಲ್ಲೇಖ
ಮನಮೋಹನ್ ಸಿಂಗ್ ಅವರನ್ನೇ ಏಕೆ ಆಯ್ಕೆ ಮಾಡಲಾಯಿತು?; PMO ಕಡತಗಳನ್ನು ತರಿಸಿಕೊಳ್ಳುತ್ತಿದ್ದ ಆರೋಪ ತಳ್ಳಿ ಹಾಕಿದ ಕಾಂಗ್ರೆಸ್ ನಾಯಕಿ

Photo credit | PTI/ X
ಹೊಸದಿಲ್ಲಿ: ಯುಪಿಎ ಸರಕಾರದ ಆಡಳಿತದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ತಮ್ಮ ನಡುವೆ ಜವಾಬ್ದಾರಿಗಳ ಹಂಚಿಕೆಯಾಗಿತ್ತು. ಮನಮೋಹನ್ ಸಿಂಗ್ ಸರಕಾರದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರೆ, ನಾನು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ನಲ್ಲಿ ಯುಪಿಎ ಸರಕಾರದ ಅಧಿಕಾರ ಹಂಚಿಕೆ ಕುರಿತು ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸರಕಾರದ ಕಡತಗಳನ್ನು ಪ್ರಧಾನಿ ಕಚೇರಿಯಿಂದ (PMO) ತರಿಸಿಕೊಂಡು ಸೋನಿಯಾ ಗಾಂಧಿ ಪರಿಶೀಲಿಸುತ್ತಿದ್ದರು ಎಂಬ ಆರೋಪ ಈ ಕೇಳಿ ಬಂದಿತ್ತು. ಈ ಆರೋಪವನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
2004ರಲ್ಲಿ ಯುಪಿಎ ಸರಕಾರ ರಚನೆಯಾಗುವ ಸಂದರ್ಭದಲ್ಲಿ ತಾವು ಕೆಲವು ಸಲಹೆಗಳನ್ನು ನೀಡಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ದೀರ್ಘಕಾಲ ಪಕ್ಷಕ್ಕಾಗಿ ದುಡಿದ ನಾಯಕರಿಗೆ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಉದ್ದೇಶದಿಂದ ಆ ಸಲಹೆಗಳನ್ನು ನೀಡಿದ್ದಾಗಿ ವಿವರಿಸಿದ್ದಾರೆ. ಆದರೆ, ಪ್ರಧಾನಿ ಕಚೇರಿಯಿಂದ ಸರಕಾರಿ ಕಡತಗಳನ್ನು ತರಿಸಿಕೊಳ್ಳುತ್ತಿದ್ದರು ಎಂಬ ಆರೋಪಗಳು 'ದುರುದ್ದೇಶಪೂರಿತ ಹೇಳಿಕೆ ಮತ್ತು ಸಂಪೂರ್ಣ ಸುಳ್ಳು' ಎಂದು ಹೇಳಿದ್ದಾರೆ.
ಪ್ರಧಾನಿಯಾಗದಿರಲು ಮೊದಲೇ ತೀರ್ಮಾನ
2004ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೂ ಕೆಲವು ತಿಂಗಳುಗಳ ಮೊದಲೇ ತಾನು ಪ್ರಧಾನಿಯಾಗುವುದಿಲ್ಲ ಎಂದು ನಿರ್ಧರಿಸಿದ್ದಾಗಿ ಸೋನಿಯಾ ಗಾಂಧಿ ಬಹಿರಂಗಪಡಿಸಿದ್ದಾರೆ.
ಈ ನಿರ್ಧಾರವನ್ನು ತಾನು ಹಾಗೂ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಸುರಕ್ಷತೆಯ ಕಾರಣದಿಂದ ತಾಯಿ ಪ್ರಧಾನಿಯಾಗುವುದು ಬೇಡ ಎಂಬುದು ಮಕ್ಕಳ ಬಲವಾದ ಬಯಕೆಯಾಗಿತ್ತು ಎಂದು ಹೇಳಿದ್ದಾರೆ.
ಮನಮೋಹನ್ ಸಿಂಗ್ ಅವರನ್ನೇ ಏಕೆ ಆಯ್ಕೆ ಮಾಡಲಾಯಿತು?
1991ರಲ್ಲಿ ದೇಶದಲ್ಲಿ ಆರ್ಥಿಕ ಉದಾರೀಕರಣಕ್ಕೆ ನಾಂದಿ ಹಾಡಿದ್ದ ಮನಮೋಹನ್ ಸಿಂಗ್ ಅವರ ಅನುಭವ ಮತ್ತು ವರ್ಚಸ್ಸು ಪ್ರಧಾನಿ ಹುದ್ದೆಗೆ ಅವರನ್ನು ಆಯ್ಕೆ ಮಾಡಲು ಪ್ರಮುಖ ಕಾರಣವಾಗಿತ್ತು ಎಂದು ಸೋನಿಯಾ ಗಾಂಧಿ ವಿವರಿಸಿದ್ದಾರೆ.
ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿದ್ದ ಎಡಪಕ್ಷಗಳಿಗೆ ಮನಮೋಹನ್ ಸಿಂಗ್ ಅವರ ಬಗ್ಗೆ ಇದ್ದ ವಿಶ್ವಾಸವೂ ಈ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅವರ ನೇಮಕದಿಂದ ಎಡಪಕ್ಷಗಳ ಆತಂಕವನ್ನು ದೂರ ಮಾಡಬಹುದು ಎಂಬ ನಿರೀಕ್ಷೆ ಇತ್ತು ಎಂದು ಆತ್ಮಚರಿತ್ರೆಯಲ್ಲಿ ತಿಳಿಸಿದ್ದಾರೆ.






