ಆನ್ಲೈನ್ ಜೂಜಾಟದಲ್ಲಿ ರೂ. 58 ಕೋಟಿ ಕಳೆದುಕೊಂಡ ವ್ಯಾಪಾರಿ
ಆರೋಪಿಯ ನಿವಾಸದಿಂದ ರೂ. 17 ಕೋಟಿ ನಗದು, 14 ಕೆಜಿ ಚಿನ್ನ ವಶಪಡಿಸಿಕೊಂಡ ಪೊಲೀಸರು

Photo: NDTV
ನಾಗಪುರ: ಆನ್ಲೈನ್ ಜೂಜಾಟದಲ್ಲಿ ನಾಗಪುರ ವ್ಯಾಪಾರಿಯೊಬ್ಬರು ರೂ. 58 ಕೋಟಿಯಷ್ಟು ಭಾರಿ ನಷ್ಟ ಅನುಭವಿಸಿದ ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು, ಇದರ ಹಿಂದೆ ಶಂಕಿತ ಬುಕ್ಕಿಯೊಬ್ಬನ ಕೈವಾಡ ಇರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು mid-day.com ವರದಿ ಮಾಡಿದೆ.
ನಾಗಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ನಗರದಲ್ಲಿರುವ ಬುಕ್ಕಿಯ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿಂದ ರೂ. 17 ಕೋಟಿ ನಗದು ಹಾಗೂ 14 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದ್ದು, ಆತ ಪೊಲೀಸರು ದಾಳಿ ನಡೆಸುವ ಕೆಲವೇ ಕ್ಷಣಗಳ ಮುನ್ನ ತನ್ನ ನಿವಾಸದಿಂದ ಪರಾರಿಯಾಗಿದ್ದಾನೆ. ಆತ ದುಬೈಗೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ ಆನ್ಲೈನ್ ಜೂಜಾಟವನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಯವಂತೆ ಆರೋಪಿ ಜೈನ್, ವ್ಯಾಪಾರಿಯ ಮನವೊಲಿಸಿದ್ದ ಎಂಬ ಸಂಗತಿ ಬಯಲಾಗಿದೆ. ಆದರೆ, ಆ ವ್ಯಾಪಾರಿಯು ಆರಂಭದಲ್ಲಿ ಈ ಕುರಿತು ಹಿಂಜರಿಕೆ ವ್ಯಕ್ತಪಡಿಸಿದರೂ, ಹವಾಲಾ ವರ್ತಕನೊಬ್ಬನ ಮೂಲಕ ಆ ವ್ಯಾಪಾರಿಯು ರೂ. 8 ಲಕ್ಷ ಬಂಡವಾಳ ಹೂಡುವಂತೆ ಪ್ರೇರೇಪಿಸಲಾಗಿತ್ತು.
ಆನ್ಲೈನ್ ಜೂಜಾಟದ ಖಾತೆಯನ್ನು ತೆರೆಯಲು ಆ ವ್ಯಾಪಾರಿಗೆ ವಾಟ್ಸ್ ಆ್ಯಪ್ ಕೊಂಡಿಯೊಂದನ್ನು ಆರೋಪಿ ಜೈನ್ ಒದಗಿಸಿದ್ದು, ಆರಂಭದ ಯಶಸ್ಸಿನ ನಂತರ ಆ ವ್ಯಾಪಾರಿಯು ರೂ. 5 ಕೋಟಿ ಲಾಭ ಗಳಿಸಿ, ತದನಂತರ ರೂ. 58 ಕೋಟಿಯಷ್ಟು ನಷ್ಟ ಅನುಭವಿಸಿದ್ದಾರೆ ಎಂದು ವರದಿಯಾಗಿದೆ,
ಈ ಕುರಿತು ವ್ಯಾಪಾರಿಯಲ್ಲಿ ಸಂಶಯವುಂಟಾಗಿ ತನ್ನ ಹಣವನ್ನು ಹಿಂದಿರುಗಿಸುವಂತೆ ಆರೋಪಿಯನ್ನು ಆಗ್ರಹಿಸಿದರೂ, ಅದಕ್ಕೆ ಜೈನ್ ನಿರಾಕರಿಸಿದ್ದಾನೆ. ನಂತರ ಆ ವ್ಯಾಪಾರಿಯು ಸೈಬರ್ ಪೊಲೀಸರೆದುರು ದೂರು ದಾಖಲಿಸಿದ್ದು, ಇದರಿಂದ ಭಾರತೀಯ ದಂಡ ಸಂಹಿತೆಯಡಿ ವಂಚನೆ ಪ್ರಕರಣ ದಾಖಲಾಗಿದೆ. ಈ ದೂರನ್ನು ಆಧರಿಸಿ ಪೊಲೀಸರು ಜೈನ್ ನಿವಾಸದ ಮೇಲೆ ದಾಳಿ ನಡೆಸಿದಾಗ ಗಮನಾರ್ಹ ಪ್ರಮಾಣದ ಸಾಕ್ಷ್ಯಗಳು ಲಭ್ಯವಾಗಿದ್ದು, ಇದರೊಂದಿಗೆ ರೂ. 14 ಕೋಟಿ ನಗದು ಹಾಗೂ ನಾಲ್ಕು ಕಿಲೋಗ್ರಾಂ ಚಿನ್ನದ ಬಿಸ್ಕತ್ಗಳೂ ದೊರೆತಿವೆ.
Next Story







