ಅಸಮರ್ಪಕ ಮುಂಗಾರು ಮಳೆ; ಭಾರಿ ಹವಾಮಾನ ವ್ಯತ್ಯಯಕ್ಕೆ ಮಾನವ ಚಟುವಟಿಕೆಗಳೇ ಕಾರಣ: ತಜ್ಞರ ಅಭಿಮತ

ಹೊಸದಿಲ್ಲಿ: ಪ್ರಸಕ್ತ ವರ್ಷದ ಮುಂಗಾರು ಋತು ಮುಕ್ತಾಯದ ಹಂತಕ್ಕೆ ಬಂದಿದ್ದು, ದೇಶದಲ್ಲಿ ಭಾರಿ ಹವಾಮಾನ ವ್ಯತ್ಯಯಕ್ಕೆ ಈ ಅವಧಿ ಸಾಕ್ಷಿಯಾಗಿದೆ. ಇಡೀ ಮುಂಗಾರಿನಲ್ಲಿ ಮಳೆಯ ಕಣ್ಣುಮುಚ್ಚಾಲೆ ಕಂಡುಬಂದಿದ್ದು, ಜೂನ್ ನಲ್ಲಿ ಶೇಕಡ 9ರಷ್ಟು ಮಳೆ ಅಭಾವ ಸ್ಥಿತಿ ಇದ್ದರೆ, ಜುಲೈ ವೇಳೆಗೆ ಇದು ಶೇಕಡ 13ರಷ್ಟು ಅಧಿಕವಾಗಿತ್ತು. ಆಗಸ್ಟ್ ನಲ್ಲಿ ಮಳೆ ಶೇಕಡ 36ರಷ್ಟು ಕಡಿಮೆಯಾಗಿದ್ದರೆ, ಸೆಪ್ಟೆಂಬರ್ ನಲ್ಲಿ ವಾಡಿಕೆಗಿಂತ ಶೇಕಡ 13ರಷ್ಟು ಅಧಿಕ ಮಳೆಯಾಗಿದೆ.
ಅಕ್ಟೋಬರ್ ವೇಳೆಗೆ ಮಳೆ ದೇಶಾದ್ಯಂತ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಆದರೆ ದೇಶದಲ್ಲಿ ಮುಂದಿನ ತಿಂಗಳು ಒಂದಷ್ಟು ಮಳೆಯಾಗುವ ನಿರೀಕ್ಷೆ ಇದ್ದು, ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಪ್ರದೇಶ ಕಂಡುಬಂದಿರುವುದು ಮಳೆ ಬಗ್ಗೆ ಒಂದಷ್ಟು ಆಶಾಭಾವನೆ ಮೂಡಿಸಲು ಕಾರಣವಾಗಿದೆ.
ಈ ಬಗೆಯ ವ್ಯತ್ಯಯಕ್ಕೆ ಏನು ಕಾರಣ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ದಶಕಗಳ ಕಾಲ ಮಾನವ ಚಟುವಟಿಕೆಗಳ ಕಾರಣದಿಂದಾಗಿ ಹವಾಮಾನ ಈ ಹಂತವನ್ನು ಪ್ರವೇಶಿಸಿದೆ ಎನ್ನುವುದು ತಜ್ಞರ ಅಭಿಮತ.
"ಈ ಬಾರಿಯ ಮುಂಗಾರು ಕುತೂಹಲಕಾರಿಯಾಗಿದೆ. ಇದು ಪಠ್ಯಗಳಲ್ಲಿದ್ದ ವಿಧಾನದಲ್ಲಿಲ್ಲ. ಸುಮಾರು ಶೇಕಡ 6ರಷ್ಟು ಮಳೆ ಅಭಾವದ ಸ್ಥಿತಿ ಇರುವ ಸಾಧ್ಯತೆ ಇದ್ದು, ಶೇಖಡ 70ರಷ್ಟು ಜಿಲ್ಲೆಗಳು ಸೌಮ್ಯ ಅಥವಾ ತೀರಾ ಕಠಿಣ ಅನಾವೃಷ್ಟಿ ಸ್ಥಿತಿಯನ್ನು ಕಾಣಲಿವೆ ಎಂದು ಭೂವಿಜ್ಞಾನ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಮತ್ತು ಹವಾಮಾನ ವಿಜ್ಞಾನಿ ಎಂ.ರಾಜೀವನ್ ಹೇಳುತ್ತಾರೆ. ಇದಕ್ಕೆ ಜಾಗತಿಕವಾದ ಹವಾಮಾನ ಅಂಶಗಳು ಕಾರಣ ಎನ್ನುವುದು ಅವರ ಅಭಿಪ್ರಾಯ.
ಎಲ್ನಿನೊ ಒಂದಷ್ಟು ಪರಿಣಾಮ ಬೀರಿದೆ. ಆದರೆ ಸೆಪ್ಟೆಂಬರ್ ನಲ್ಲಿ ಇದರ ಛಾಯೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಯಾವ ಅಂಶಗಳು ಮಳೆಗೆ ಪೂರಕವಾಗಿದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಋಣಾತ್ಮಕ ಫೆಸಿಫಿಕ್ ಡಿಕ್ಯಾಡಲ್ ಆಸಿಲೇಶನ್ (ಪಿಡಿಓ) ಮತ್ತು ಧನಾತ್ಮಕ ಇಂಡಿಯನ್ ಓಶನ್ ಡೈಪೋಲ್ (ಐಓಡಿ), ಅನುಕೂಲಕರ ಜೈಲಿಯನ್ ಆಸಿಯೇಶನ್ (ಎಂಜೆಓ) ಹಂತಗಳು ಬಹುಶಃ ನೆರವಾಗಿರಬೇಕು ಎಂದು ಅವರು ಹೇಳಿದ್ದಾರೆ.







