ಶೌಚಾಲಯದಲ್ಲಿ ಪಾಕ್ ಧ್ವಜ ಅಂಟಿಸಿ ಕೋಮು ಸಂಘರ್ಷಕ್ಕೆ ಪ್ರಚೋದನೆ: ಇಬ್ಬರ ಬಂಧನ

PC: x.com/MyAnandaBazar
ಕೊಲ್ಕತ್ತಾ: ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ ಜಿಲ್ಲೆಯ ರೈಲು ನಿಲ್ದಾಣ ಪಕ್ಕದ ಸಾರ್ವಜನಿಕ ಶೌಚಾಲಯದಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಇಡುವ ಮೂಲಕ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಬೋನ್ಗಾಂವ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಗೋಪಾಲಪುರ ಠಾಣೆ ವ್ಯಾಪ್ತಿಯ ಅಕೈಪುರ ನಿಲ್ದಾಣದ ಬಳಿ ಬುಧವಾರ ಈ ಧ್ವಜ ಪತ್ತೆಯಾಗಿದೆ. ಅರಾಜಕತೆಯನ್ನು ಪ್ರಚೋದಿಸುವ ಉದ್ದೇಶದಿಂದ "ಹಿಂದೂಸ್ತಾನ ಮುರ್ದಾಬಾದ್" ಮತ್ತು "ಪಾಕಿಸ್ತಾನ ಜಿಂದಾಬಾದ್" ಎಂದು ಗೋಡೆಯ ಮೇಲೆ ಬರೆಯಲು ಕೂಡಾ ಆರೋಪಿಗಳು ಪ್ರಯತ್ನಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಬಂಧಿತರನ್ನು ಚಂದನ್ ಮಲಾಕರ್ (30) ಮತ್ತು ಪ್ರಜ್ಞಾಜೀತ ಮಂಡಲ್ (45) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಥಳೀಯರಾಗಿದ್ದು, ಸನಾತನಿ ಏಕತಾ ಮಂಚ್ ಮತ್ತು ಒಂದು ರಾಜಕೀಯ ಪಕ್ಷದ ಸದಸ್ಯರೆಂದು ಪೊಲೀಸರು ತಿಳಿಸಿದ್ದಾರೆ.
ಇದು ಉದ್ದೇಶಪೂರ್ವಕ ಕೃತ್ಯವಾಗಿದ್ದು, ಕೋಮು ಸಾಮರಸ್ಯವನ್ನು ಕದಡುವ ಉದೇಶದಿಂದ ಈ ಕೃತ್ಯ ಎಸಗಲಾಗಿದೆ. ಇಬ್ಬರೂ ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಪೊಲೀಸರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. "ಕೋಮು ಪ್ರಕ್ಷುಬ್ಧತೆಯನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಿದ ಪ್ರಯತ್ನ ಇದು. ಇಂಥ ಪಿತೂರಿಗಳನ್ನು ರೂಪಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.







