ಬಿಜೆಪಿಗೆ ಹೆಚ್ಚಿದ ಸ್ವಯಂಪ್ರೇರಿತ ದೇಣಿಗೆ; ಸಂಗ್ರಹಿಸಿದ ಮೊತ್ತ ಎಷ್ಟು ಗೊತ್ತೇ?

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ: ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಗೆ 2024-25ರಲ್ಲಿ ಹರಿದು ಬಂದ ಸ್ವಯಂಪ್ರೇರಿತ ದೇಣಿಗೆ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡ 54ರಷ್ಟು ಹೆಚ್ಚಳವಾಗಿದೆ. 2023-24ರಲ್ಲಿ ಬಿಜೆಪಿಗೆ 3967 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದ್ದರೆ, ಮರು ವರ್ಷ ಅದು 2158 ಕೋಟಿಯಷ್ಟು ಹೆಚ್ಚಿ 6125 ಕೋಟಿ ರೂಪಾಯಿ ತಲುಪಿದೆ. ಸುಪ್ರೀಂಕೋರ್ಟ್ 2024ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿದ್ದರಿಂದ ಆಗಬಹುದು ಎಂದು ಅಂದಾಜಿಸಿದ್ದ ನಷ್ಟಕ್ಕಿಂತ ಅಧಿಕ ಮೊತ್ತದಷ್ಟು ಆದಾಯ ಹೆಚ್ಚಳವಾಗಿದೆ.
ಭಾರತೀಯ ಜನತಾ ಪಕ್ಷಕ್ಕೆ 2023-24ರಲ್ಲಿ 1686 ಕೋಟಿ ರೂಪಾಯಿ ಚುನಾವಣಾ ಬಾಂಡ್ ಮೂಲಕ ಆದಾಯ ಬಂದಿತ್ತು. ಚುನಾವಣಾ ಬಾಂಡ್ ಅಡಿಯಲ್ಲಿ ಕಾರ್ಪೊರೇಟ್ ಕಂಪನಿಗಳು ಅನಾಮಧೇಯವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತವೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ 2024-25ನೇ ಸಾಲಿನ ಪರಿಶೋಧಿತ ವರದಿಯ ಪ್ರಕಾರ, ಬಿಜೆಪಿಗೆ ಹರಿದು ಬಂದ ಕಾರ್ಪೊರೇಟ್ ದೇಣಿಗೆ 2023-24ರಲ್ಲಿ ಇದ್ದ 1885 ಕೋಟಿಯಿಂದ 2024-25ರಲ್ಲಿ 5422 ಕೋಟಿ ರೂಪಾಯಿಗೆ ಹೆಚ್ಚಿದೆ.
ಕಾಂಗ್ರೆಸ್ ಪಕ್ಷ ಸಲ್ಲಿಸಿದ ವಾರ್ಷಿಕ ಪರಿಶೋಧಿತ ವರದಿಯ ಪ್ರಕಾರ, 918 ಕೋಟಿ ರೂಪಾಯಿ ಆದಾಯ ಗಳಿಸಿದ್ದು, 1112 ಕೋಟಿ ರೂಪಾಯಿ ವೆಚ್ಚ ತೋರಿಸಲಾಗಿದೆ.
ಅನುದಾನ, ದೇಣಿಗೆ ಮತ್ತು ಕೊಡುಗೆಗಳು ಸೇರಿದಂತೆ ಪ್ರಮುಖ ವಿರೋಧ ಪಕ್ಷದ ಒಟ್ಟು ಆದಾಯ 2024-25ರಲ್ಲಿ 522 ಕೋಟಿಯಷ್ಟು ಕಡಿಮೆಯಾಗಿದ್ದು, 2023-24ರಲ್ಲಿ 1130 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಬಾಂಡ್ ರದ್ದತಿ ಇದಕ್ಕೆ ಮುಖ್ಯ ಕಾರಣವಾಗಿದ್ದು, 2023-24ರಲ್ಲಿ ಕಾಂಗ್ರೆಸ್ ಪಕ್ಷ ಬಾಂಡ್ ಮೂಲಕ 828 ಕೋಟಿ ರೂಪಾಯಿ ಸಂಗ್ರಹಿಸಿತ್ತು.
ಬಿಜೆಪಿಗೆ ಬಂದಿರುವ ವೈಯಕ್ತಿಕ ದೇಣಿಗೆ ಕೂಡಾ 2023-24ರಲ್ಲಿ ಇದ್ದ 240 ಕೋಟಿಯಿಂದ 641 ಕೋಟಿ ರೂಪಾಯಿಗೆ ಹೆಚ್ಚಿದೆ.







