ಇರಾನ್ ನಿಂದ ಇದುವರೆಗೆ 2,296 ಭಾರತೀಯರ ತೆರವು: ವಿದೇಶಾಂಗ ವ್ಯವಹಾರಗಳ ಸಚಿವಾಲಯ

Photo: X/@MEAIndia via PTI Photo
ಹೊಸದಿಲ್ಲಿ: ಪಶ್ಚಿಮ ಏಶ್ಯಾದಲ್ಲಿ ಸಂಘರ್ಷದ ನಡುವೆ ಇರಾನ್ನಿಂದ 2,295 ಭಾರತೀಯರನ್ನು ತೆರವುಗೊಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
‘ಆಪರೇಷನ್ ಸಿಂಧು’ವಿನ ಭಾಗವಾಗಿ ಇರಾನ್ನ ಮಶ್ಶಾದ್ ನಗರದಿಂದ ವಿಶೇಷ ವಿಮಾನದ ಮೂಲಕ 292 ಭಾರತೀಯ ಪ್ರಜೆಗಳು ಮಂಗಳವಾರ ಮುಂಜಾನೆ 3.30ಕ್ಕೆ ಹೊಸದಿಲ್ಲಿಗೆ ಆಗಮಿಸಿದ್ದಾರೆ ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
290 ಭಾರತಿಯರು ಹಾಗೂ ಓರ್ವ ಶ್ರೀಲಂಕಾ ಪ್ರಜೆಯನ್ನು ಹೊತ್ತ ಇನ್ನೊಂದು ವಿಮಾನ ಮಶ್ಶಾದ್ನಿಂದ ಹೊಸದಿಲ್ಲಿಗೆ ಸೋಮವಾರ ಸಂಜೆ 7.15ಕ್ಕೆ ಆಗಮಿಸಿತು.
ತೆರವುಗೊಳಿಸಲಾದ ಭಾರತೀಯರನ್ನು ಒಳಗೊಂಡ ಮೊದಲ ವಿಮಾನ ಹೊಸದಿಲ್ಲಿಗೆ ಗುರುವಾರ ಆಗಮಿಸಿತು. ಇದನ್ನು ಅನುಸರಿಸಿ ಸರಣಿಯಾಗಿ ವಿಶೇಷ ವಿಮಾನಗಳು ಆಗಮಿಸಿದವು.
ಇಸ್ರೇಲ್ನಿಂದ ತೆರವುಗೊಂಡ 161 ಭಾರತೀಯರಿದ್ದ ವಿಶೇಷ ವಿಮಾನ ಮಂಗಳವಾರ ಬೆಳಗ್ಗೆ ಹೊಸದಿಲ್ಲಿಗೆ ಆಗಮಿಸಿತು. ಭಾರತೀಯ ವಾಯು ಪಡೆ ಪ್ರತ್ಯೇಕವಾಗಿ ಇಸ್ರೇಲ್ನಿಂದ ತೆರವುಗೊಂಡ 165 ಭಾರತೀಯರನ್ನು ಹೊಸದಿಲ್ಲಿಗೆ ಮಂಗಳವಾರ ಬೆಳಗ್ಗೆ ಕರೆದುಕೊಂಡು ಬಂದಿತು. ಎರಡೂ ವಿಮಾನ ಜೋರ್ಡಾನ್ನ ರಾಜಧಾನಿ ಅಮನ್ನಿಂದ ಆಗಮಿಸಿತು.
160 ಮಂದಿ ಭಾರತೀಯರಿದ್ದ ಮೊದಲ ತಂಡ ಇಸ್ರೇಲ್ನಿಂದ ಜೋರ್ಡಾನ್ ಗೆ ರವಿವಾರ ತೆರಳಿತು ಎಂದು ವರದಿ ಹೇಳಿದೆ. ಇಸ್ರೇಲ್ನಿಂದ 443 ಭಾರತೀಯರ ಎರಡನೇ ತಂಡವನ್ನು ಸೋಮವಾರ ಜೋರ್ಡಾನ್ ಹಾಗೂ ಈಜಿಪ್ಟ್ನ ಗಡಿಯ ಮೂಲಕ ಸೋಮವಾರ ತೆರವುಗೊಳಿಸಲಾಯಿತು ಎಂದು ಸುದ್ದಿ ಸಂಸ್ಥೆ ತಿಳಿಸಿದೆ.







