ಮುಂದಿನ ಆದೇಶದವರೆಗೂ ದೇಶ ತೊರೆಯಲು ಪಾಕಿಸ್ತಾನದ ಪ್ರಜೆಗಳಿಗೆ ಅವಕಾಶ ನೀಡಿದ ಭಾರತ!
ಇನ್ನೂ ಗಡಿ ತೆರೆಯದ ಪಾಕಿಸ್ತಾನ

ವಾಘಾ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನಕ್ಕೆ ಮರಳಲು ತನ್ನ 14 ದಿನಗಳ ಪುಟ್ಟ ಮಗುವಿನೊಂದಿಗೆ ಸಿದ್ಧವಾಗಿರುವ ಬಾಣಂತಿ, ಪಾಕಿಸ್ತಾನಿ ಪ್ರಜೆ ಸಾರಾ ಖಾನ್ | PTI PHOTO
ಹೊಸದಿಲ್ಲಿ: ಇನ್ನೂ ಭಾರತದಲ್ಲೇ ಉಳಿದುಕೊಂಡಿರುವ ಪಾಕಿಸ್ತಾನ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ತಮ್ಮ ತವರಿಗೆ ಮರಳಲು ಕೇಂದ್ರ ಸರಕಾರ ಮುಂದಿನ ಆದೇಶದವರೆಗೂ ಅವಕಾಶ ನೀಡಿದೆ. ಆದರೆ, ಪಾಕಿಸ್ತಾನ ಇದುವರೆಗೆ ಗಡಿ ದ್ವಾರಗಳನ್ನು ತೆರೆದಿಲ್ಲ. ಎಪ್ರಿಲ್ 30ರ ನಂತರ ಗಡಿ ದ್ವಾರಗಳನ್ನು ಮುಚ್ಚಲಾಗುವುದು ಎಂಬ ತನ್ನ ಈ ಹಿಂದಿನ ಆದೇಶವನ್ನು ತನ್ನ ಇತ್ತೀಚಿನ ಆದೇಶದಲ್ಲಿ ಕೇಂದ್ರ ಗೃಹ ಸಚಿವಾಲಯ ಮಾರ್ಪಡಿಸಿದೆ.
"ಈ ಆದೇಶವನ್ನು ಪರಿಷ್ಕರಿಸಲಾಗಿದ್ದು, ಭಾಗಶಃ ಪರಿಷ್ಕರಣೆಯೊಂದಿಗೆ ಮುಂದಿನ ಆದೇಶದವರೆಗೆ ಪಾಕಿಸ್ತಾನದ ಪ್ರಜೆಗಳು ಅಟ್ಟಾರಿಯಲ್ಲಿನ ಸಮಗ್ರ ತಪಾಸಣಾ ಠಾಣೆಗಳ ಮೂಲಕ ಸೂಕ್ತ ಅನುಮತಿಯೊಂದಿಗೆ ಭಾರತದಿಂದ ಪಾಕಿಸ್ತಾನಕ್ಕೆ ನಿರ್ಗಮಿಸಬಹುದಾಗಿದೆ" ಎಂದು ನೂತನ ಆದೇಶದಲ್ಲಿ ಹೇಳಲಾಗಿದೆ.
ಎಪ್ರಿಲ್ 30ರ ಗಡುವು ಅಂತ್ಯಗೊಂಡ ನಂತರವೂ ಗಡಿ ಬಳಿ ಸಿಲುಕಿಕೊಂಡಿದ್ದ ಪಾಕಿಸ್ತಾನದ ಪ್ರಜೆಗಳಿಗೆ ಈ ಹೊಸ ಆದೇಶವು ನಿರಾಳ ಭಾವ ಮೂಡಿಸಿದೆ. ಆದರೆ, ಪಾಕಿಸ್ತಾನದ ಪ್ರಜೆಗಳನ್ನು ತನ್ನ ದೇಶದೊಳಕ್ಕೆ ಬಿಟ್ಟುಕೊಳ್ಳಲು ಪಾಕಿಸ್ತಾನವಿನ್ನೂ ಗಡಿ ದ್ವಾರಗಳನ್ನು ತೆರೆಯಬೇಕಿದೆ ಎಂದು ವರದಿಯಾಗಿದೆ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ನಂತರ, ಭಾರತದಲ್ಲಿರುವ ಎಲ್ಲ ಪಾಕಿಸ್ತಾನದ ಪ್ರಜೆಗಳು ಎಪ್ರಿಲ್ 30ರೊಳಗೆ ದೇಶ ತೊರೆಯಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು. ಈ ಆದೇಶದನ್ವಯ ಇಲ್ಲಿಯವರೆಗೆ 55 ಮಂದಿ ರಾಜತಾಂತ್ರಿಕರು ಹಾಗೂ ಅವರ ನೆರವು ಸಿಬ್ಬಂದಿಗಳು ಸೇರಿದಂತೆ ಒಟ್ಟು 786 ಪಾಕಿಸ್ತಾನದ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತ ತೊರೆದಿದ್ದಾರೆ. ಈ ಕ್ರಮಕ್ಕೆ ಪ್ರತಿಯಾಗಿ, ಪಾಕಿಸ್ತಾನದಿಂದ ಒಟ್ಟು 1,465 ಭಾರತೀಯರನ್ನು ಹೊರ ಕಳಿಸಲಾಗಿದೆ.







