ಭಾರತ ಈಗಾಗಲೇ ಹಿಂದೂ ರಾಷ್ಟ್ರ, ಘೋಷಣೆಯ ಅಗತ್ಯವಿಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Photo Credit: PTI
ನಾಗ್ಪುರ: ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ, ಘೋಷಣೆಯ ಅಗತ್ಯವಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಅಧಿಕಾರದಲ್ಲಿರುವವರ ಬದ್ಧತೆ ಮತ್ತು ದೇಶದ ಪ್ರತಿಯೊಬ್ಬ ವ್ಯಕ್ತಿಯ ಬೆಂಬಲದಿಂದಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಪ್ರತ್ಯೇಕವಾಗಿ ಘೋಷಿಸುವ ಅಗತ್ಯವಿಲ್ಲ. ಅದು ಈಗಾಗಲೇ ಆಗಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರದ ರೇಶಿಂಬಾಗ್ನಲ್ಲಿ ಡಾ.ಹೆಡ್ಗೆವಾರ್ ಸ್ಮಾರಕ ಸಮಿತಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಶ್ರೀರಾಮನ ಇಚ್ಛೆಯಿಂದ ರಾಮಮಂದಿರ ನಿರ್ಮಾಣ ಸಾಧ್ಯವಾಯಿತು ಎಂದು ಹೇಳಿದರು.
ಅವರು ಈ ಘಟನೆಗೆ ಕೃಷ್ಣನು ಗೋವರ್ಧನ ಪರ್ವತವನ್ನು ಎತ್ತಿದ ಘಟನೆಯನ್ನು ಹೋಲಿಕೆ ಮಾಡಿ ವಿವರಿಸಿದರು. ದೇವರು ತನ್ನ ಬೆರಳ ತುದಿಯಲ್ಲಿ ಪರ್ವತವನ್ನು ಹಿಡಿದಿದ್ದರೂ, ಜನರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದಾಗ ಮಾತ್ರ ಆ ಕಾರ್ಯ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸನಾತನ ಧರ್ಮದ ಪುನರುತ್ಥಾನಕ್ಕೆ, ಭಾರತದ ಪುನರುತ್ಥಾನ ಅತ್ಯಗತ್ಯ. 150 ವರ್ಷಗಳ ಹಿಂದೆ ಯೋಗಿ ಅರವಿಂದ ಅವರು ಈ ಕಲ್ಪನೆಯನ್ನು ವ್ಯಕ್ತಪಡಿಸಿದ್ದರು. ಪುನರುತ್ಥಾನದ ಪ್ರಕ್ರಿಯೆಯು 1857ರಲ್ಲಿ ಪ್ರಾರಂಭವಾಯಿತು ಎಂದು ಮೋಹನ್ ಭಾಗವತ್ ಹೇಳಿದರು.






