ಭಾರತ ಮೂಲದ ಅಮೆರಿಕ ಟೆಕ್ ಕಂಪನಿ ಸಿಇಓ ವೇದಿಕೆ ದುರಂತದಲ್ಲಿ ಮೃತ್ಯು
Photo: TOI
ಭಾರತ ಮೂಲದ ಅಮೆರಿಕ ಟೆಕ್ ಕಂಪನಿ ಸಿಇಓ ವೇದಿಕೆ ದುರಂತದಲ್ಲಿ ಮೃತ್ಯು
ಹೈದರಾಬಾದ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಿಇಓ ಹಾಗೂ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪನಿಯ ಸಂಸ್ಥಾಪಕ ಕಾರ್ಪೊರೇಟ್ ಸಮಾರಂಭದ ವೇಳೆ ವೇದಿಕೆಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಇಲಿನೊಯಿಸ್ ಮೂಲದ ಸಿಇಓ ಸಂಜಯ್ ಶಾ (56) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಕಂಪನಿಯ ಅಧ್ಯಕ್ಷ ವಿಶ್ವನಾಥ್ ರಾಜು ಡಾಟ್ತಾ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.
ಗುರುವಾರ ರಾತ್ರಿ ರಾಮೋಜಿ ಫಿಲಂ ಸಿಟಿಯಲ್ಲಿ ನಡೆದ ವಿಸ್ಟೆಕ್ ಏಷ್ಯಾ-ಫೆಸಿಫಿಕ್ ಪ್ರೈವೇಟ್ ಲಿಮಿಟೆಡ್ನ ರಜತ ಮಹೋತ್ಸವ ಸಮಾರಂಭದ ವೇಳೆ ಸಂಜಯ್ ಶಾ ಮತ್ತು ವಿಶ್ವನಾಥ್ ರಾಜು ಅವರನ್ನು ಹೊತ್ತಿದ್ದ ಕಬ್ಬಿಣದ ಗೂಡು ಕುಸಿದು ದುರಂತ ನಡೆದಿದೆ.
"ಸಮಾರಂಭಕ್ಕೆ ಚಾಲನೆ ನೀಡಲು ಶಾ ಹಾಗೂ ರಾಜು ಈ ಕಬ್ಬಿಣದ ಗೂಡಿನಿಂದ ಕೆಳಗಿಳಿದು ವೇದಿಕೆಗೆ ಬರಬೇಕಿತ್ತು. ಅವರನ್ನು ರೋಪ್ ಬಳಸಿ ಕಬ್ಬಿಣದ ಗೂಡಿನ ಮೂಲಕ ಕೆಳಗಿದ್ದ ವೇದಿಕೆಗೆ ಕರೆತರಲು ಉದ್ದೇಶಿಸಲಾಗಿತ್ತು. ಸಂಗೀತದ ಹಿಮ್ಮೇಳದಲ್ಲಿ ಶಾ ಹಾಗೂ ರಾಜು ಸಿಬ್ಬಂದಿಗೆ ಕೈಬೀಸುತ್ತಾ ಇಳಿಯುತ್ತಿದ್ದರು. ಆದರೆ ದಿಢೀರನೇ ಈ ಕಬ್ಬಿಣದ ಗೂಡಿಗೆ ಜೋಡಿಸಿದ್ದ ಎರಡು ವೈರ್ಗಳ ಪೈಕಿ ಒಂದು ತುಂಡಾಯಿತು. ಇಬ್ಬರೂ 15 ಅಡಿ ಕೆಳಕ್ಕೆ ಬಿದ್ದು, ಕಾಂಕ್ರಿಟ್ ವೇದಿಕೆಗೆ ಅಪ್ಪಳಿಸಿದರು. ಇದು ಗಂಭೀರ ಸ್ವರೂಪದ ಗಾಯಕ್ಕೆ ಕಾರಣವಾಯಿತು" ಎಂದು ಸಬ್ಇನ್ಸ್ಪೆಕ್ಟರ್ ಡಿ.ಕರುಣಾಕರ ರೆಡ್ಡಿ ಹೇಳಿದ್ದಾರೆ."
ತಕ್ಷಣವೇ ಇಬ್ಬರನ್ನೂ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಿದರೂ, ಶಾ ಅವರ ದೇಹಸ್ಥಿತಿ ಸುಧಾರಿಸದೇ ಶಾ ಸ್ವಲ್ಪ ಸಮಯದಲ್ಲಿ ಕೊನೆಯುಸಿರೆಳೆದರು ಎಂದು ಕಂಪನಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.