ಮಳೆಯಿಂದ ಅಡ್ಡಿ | CEC ಜ್ಞಾನೇಶ್ ಕುಮಾರ್ ವಿರುದ್ಧದ ಸಾರ್ವಜನಿಕ ದೋಷಾರೋಪಣೆ ಪ್ರಕ್ರಿಯೆ ನಾಳೆಗೆ ಮುಂದೂಡಿದ 'ಇಂಡಿಯಾ' ಮೈತ್ರಿಕೂಟ
ನ. 1ರಂದು ಕಾಂಗ್ರೆಸ್ ನಿಂದ 'ದಿಲ್ಲಿ ಚಲೋ'

ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ: ಮಳೆಯ ಕಾರಣದಿಂದಾಗಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಸಾರ್ವಜನಿಕ ದೋಷಾರೋಪಣೆ ಪ್ರಕ್ರಿಯೆಯನ್ನು 'ಇಂಡಿಯಾ' ಒಕ್ಕೂಟ ಶನಿವಾರಕ್ಕೆ ಮುಂದೂಡಿದೆ. ಹೊಸದಿಲ್ಲಿಯ ರಾಜಾಜಿ ಮಾರ್ಗದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ (ನಂ. 10)ದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು.
'ಮತ ಕಳ್ಳತನ'ದ ಆರೋಪಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ವ್ಯಕ್ತಪಡಿಸಿರುವ ಕಳವಳಗಳಿಗೆ ಚುನಾವಣಾ ಆಯೋಗ ಸ್ಪಂದಿಸಿಲ್ಲ ಎಂದು ಒಕ್ಕೂಟ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂಬ ತಮ್ಮ ಬೇಡಿಕೆಯನ್ನು ಸಾರ್ವಜನಿಕವಾಗಿ ಮಂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿಇಸಿ ವಿರುದ್ಧದ ಆರೋಪಗಳು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಯ ಕುರಿತು ಚರ್ಚಿಸುವ ಉದ್ದೇಶದಿಂದ 'ಇಂಡಿಯಾ' ಒಕ್ಕೂಟದ ನಾಯಕರು ಹಾಗೂ ವಿವಿಧ ಮೈತ್ರಿಕೂಟದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೂಲಗಳ ಪ್ರಕಾರ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ನಿರ್ಣಯವೊಂದನ್ನು ಮಂಡಿಸಲಿದ್ದು, ಬಳಿಕ ವಿವಿಧ ಪಕ್ಷಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ.
ಇನ್ನೊಂದೆಡೆ, 'ಮತ ಕಳ್ಳತನ'ದ ಆರೋಪದ ವಿರುದ್ಧ ನವೆಂಬರ್ 1ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ 'ದಿಲ್ಲಿ ಚಲೋ' ಮೆರವಣಿಗೆ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಈ ಮೆರವಣಿಗೆಯ ಮೂಲಕ ಕನಿಷ್ಠ ಹತ್ತು ಲಕ್ಷ ನಾಗರಿಕರನ್ನು ಒಗ್ಗೂಡಿಸುವ ಗುರಿಯನ್ನು ಪಕ್ಷ ಹೊಂದಿದೆ.






