ಅಸಮರ್ಥನೀಯ ಮತ್ತು ಅಸಮಂಜಸ : ರಷ್ಯಾದಿಂದ ತೈಲ ಆಮದು ಕುರಿತು ಟ್ರಂಪ್ ಬೆದರಿಕೆಗೆ ಭಾರತ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (File Photo: PTI)
ಹೊಸದಿಲ್ಲಿ: ಉಕ್ರೇನ್ ಯುದ್ಧದ ಮಧ್ಯೆ ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಹೆಚ್ಚು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಹಿನ್ನೆಲೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಭಾರತ ತಿರುಗೇಟು ನೀಡಿದೆ. ಕಚ್ಚಾ ತೈಲ ಆಮದಿನ ಬಗ್ಗೆ ಅವರ ದ್ವಂದ್ವ ನಿಲುವನ್ನು ಪ್ರಶ್ನಿಸಿದೆ.
ರಷ್ಯಾದಿಂದ ತೈಲ ಆಮದಿನ ಬಗ್ಗೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಟೀಕೆಗಳನ್ನು ಖಂಡಿಸಿದ ಭಾರತ, ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅಸಮರ್ಥನೀಯ ಮತ್ತು ಅಸಮಂಜಸ ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಉಕ್ರೇನ್ ಸಂಘರ್ಷದ ನಂತರ ಭಾರತ ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸುವ ನಿರ್ಧಾರ ತೆಗೆದುಕೊಂಡಿದೆ. ಸಾಂಪ್ರದಾಯಿಕ ಇಂಧನ ಪೂರೈಕೆದಾರರು ತಮ್ಮ ರಫ್ತುಗಳನ್ನು ಯುರೋಪ್ ಕಡೆಗೆ ತಿರುಗಿಸಿದ ಕಾರಣ ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಆ ಸಮಯದಲ್ಲಿ ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವ ದೃಷ್ಟಿಯಿಂದ ಅಮೆರಿಕ ಭಾರತದ ಖರೀದಿಗಳನ್ನು ಪ್ರೋತ್ಸಾಹಿಸಿತ್ತು. ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಇಂಧನ ಬೆಲೆ ನೀಡಲು ರಷ್ಯಾದಿಂದ ಇಂಧನ ಆಮದು ಅತ್ಯಗತ್ಯ ಎಂದು ರಣಧೀರ್ ಜೈಸ್ವಾಲ್ ಹೇಳಿದರು.
ಉಕ್ರೇನ್ ಜೊತೆಗಿನ ಯುದ್ಧದ ಸಮಯದಲ್ಲಿ ರಷ್ಯಾದಿಂದ 'ಬೃಹತ್ ಪ್ರಮಾಣದ' ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಸುಂಕಗಳನ್ನು ಗಣನೀಯವಾಗಿ ಹೆಚ್ಚಿಸುವುದಾಗಿ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕಿದ್ದರು. ರಷ್ಯಾದ ಯುದ್ಧ ಟ್ಯಾಂಕರ್ಗಳಿಂದ ಉಕ್ರೇನ್ನಲ್ಲಿ ಹಲವು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಈ ಕಾರಣದಿಂದಲೇ ಭಾರತ ಖರೀದಿಸುವ ಎಲ್ಲಾ ಸರಕುಗಳಿಗೂ ಸುಂಕವನ್ನು ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಟ್ರಂಪ್ ಹೇಳಿದ್ದರು.







