ಶಾಂತಿ, ರಾಜತಾಂತ್ರಿಕ ಮಾತುಕತೆಗೆ ಮರಳಬೇಕೆಂಬುದು ಭಾರತದ ನಿಲುವು: ಪಶ್ಚಿಮ ಏಶ್ಯಾ ಸಂಘರ್ಷದ ಕುರಿತು ರಾಜ್ಯಸಭೆಗೆ ತಿಳಿಸಿದ ಸಚಿವ ಜೈಶಂಕರ್

ವಿದೇಶಾಂಗ ಸಚಿವ ಎಸ್ ಜೈಶಂಕರ್ (Photo: PTI)
ಹೊಸದಿಲ್ಲಿ: ಭಾರತ ಶಾಂತಿಗೆ ಆದ್ಯತೆ ನೀಡುತ್ತಿದ್ದು ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳಿಗೆ ಮರಳಬೇಕೆಂಬ ನಿಲುವನ್ನು ಹೊಂದಿದೆ ಎಂದು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಪಶ್ಚಿಮ ಏಶ್ಯಾ ಸಂಘರ್ಷದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಎಸ್ ಜೈಶಂಕರ್, ಭಾರತ ಶಾಂತಿ, ಸಂವಾದ, ರಾಜತಾಂತ್ರಿಕ ಮಾತುಕತೆ, ಉದ್ವಿಗ್ನತೆ ನಿಯಂತ್ರಣ, ಸಂಯಮ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದ್ದಾರೆ.
ಯುದ್ಧಪೀಡಿತ ಪ್ರದೇಶದಲ್ಲಿನ ಭಾರತೀಯರ ಯೋಗಕ್ಷೇಮ ಮತ್ತು ಭದ್ರತೆ ಸರಕಾರದ ಆದ್ಯತೆಯಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿಕಟವಾಗಿ ಗಮನಿಸುತ್ತಿದ್ದಾರೆ ಎಂದು ಎಸ್ ಜೈಶಂಕರ್ ಹೇಳಿದ್ದಾರೆ.
“ಪಶ್ಚಿಮ ಏಶ್ಯಾದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಜೈಶಂಕರ್ ರಾಜ್ಯಸಭೆಯಲ್ಲಿ ಹೇಳಿದರು.
ಎಲ್ಲಾ ಸಮಸ್ಯೆಗಳನ್ನು ಸಂವಾದ ಮತ್ತು ಚರ್ಚೆಗಳ ಮೂಲಕವೇ ಪರಿಹರಿಸಬೇಕು ಎಂಬ ನಂಬಿಕೆಯನ್ನು ನಾವು ಹೊಂದಿದ್ದೇವೆ. ಸಂಘರ್ಷ ಆರಂಭವಾದ ಬಳಿಕ ಸರಕಾರ ಪರಿಸ್ಥಿತಿಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದೆ. ಈ ಸಂದರ್ಭದಲ್ಲಿ, ಇರಾನ್ನ ಉನ್ನತ ನಾಯಕತ್ವದೊಂದಿಗೆ ಸಂಪರ್ಕ ಸಾಧಿಸುವುದು ಸ್ವಲ್ಪ ಕಷ್ಟ. ನಾನು ಇರಾನ್ನ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಜೈಶಂಕರ್ ಹೇಳಿದರು.







