ಮಹಾರಾಷ್ಟ್ರ | ಭಾರತ-ಪಾಕಿಸ್ತಾನ ಪಂದ್ಯದ ವೇಳೆ ದೇಶವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಬಾಲಕನ ಬಂಧನ
ಕುಟುಂಬಕ್ಕೆ ಆಧಾರವಾಗಿದ್ದ ಗುಜಿರಿ ಅಂಗಡಿ ಧ್ವಂಸ, ಹೆತ್ತವರನ್ನೂ ಬಂಧಿಸಿದ ಪೊಲೀಸರು

Photo | X/@meNeeleshNRane
ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ದೇಶವಿರೋಧಿ ಘೋಷಣೆಗಳನ್ನು ಕೂಗಿರುವ ಆರೋಪದಲ್ಲಿ 15 ವರ್ಷದ ಬಾಲಕ ಮತ್ತು ಆತನ ಪೋಷಕರನ್ನು ಬಂಧಿಸಿದ್ದಲ್ಲದೆ ಅವರ ಜೀವನಕ್ಕೆ ಆಧಾರವಾಗಿದ್ದ ಗುಜಿರಿ ಅಂಗಡಿಯನ್ನು ಕೂಡ ಅಧಿಕಾರಿಗಳು ಕೆಡವಿದ್ದಾರೆ ಎಂದು ವರದಿಯಾಗಿದೆ.
ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ದಿನ ರಾತ್ರಿ 9.30ರ ಸುಮಾರಿಗೆ ಬಾಲಕ ದೇಶ ವಿರೋಧಿ ಘೋಷಣೆ ಕೂಗಿದ್ದಾನೆ ಎಂದು ವ್ಯಕ್ತಿಯೋರ್ವ ಆರೋಪಿಸಿದ್ದಾನೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ಸಿಂಧುದುರ್ಗದ ಪೊಲೀಸ್ ಅಧೀಕ್ಷಕ ಸೌರಭ್ ಅಗರ್ವಾಲ್ ಪ್ರತಿಕ್ರಿಯಿಸಿ, ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ದಿನ ರಾತ್ರಿ 9.30ರ ಸುಮಾರಿಗೆ ಬಾಲಕ ದೇಶ ವಿರೋಧಿ ಘೋಷಣೆಗಳನ್ನು ಕೂಗಿರುವ ಬಗ್ಗೆ ವ್ಯಕ್ತಿಯೋರ್ವರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ನೆರಹೊರೆಯವರು ಮತ್ತು ಬಾಲಕನ ಕುಟುಂಬಸ್ಥರ ನಡುವೆ ಗಲಾಟೆ ನಡೆಯಿತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳೀಯರ ದೂರಿನ ಬಳಿಕ ಬಾಲಕನ ವಿರುದ್ಧ ಪ್ರಕರಣವನ್ನು ಕೂಡ ದಾಖಲಿಸಲಾಗಿದೆ. ಆರೋಪಿ ಅಪ್ರಾಪ್ತನಾಗಿರುವುದರಿಂದ ನಾವು ವೀಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದರು.
ಉತ್ತರ ಪ್ರದೇಶ ಮೂಲದ ಬಾಲಕನ ಕುಟುಂಬ 15 ವರ್ಷಗಳ ಹಿಂದೆ ಮಾಲ್ವಾನ್ಗೆ ತೆರಳಿ ಅಲ್ಲಿ ವಾಸ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಪೋಷಕರನ್ನು ಕೂಡ ರವಿವಾರ ಬಂಧಿಸಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196, 197 ಮತ್ತು 3(5)ರಡಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸ್ಥಳೀಯ ನಿವಾಸಿಗಳು ಬಾಲಕನ ಪೋಷಕರ ವಿರುದ್ಧ ಹೆಚ್ಚಿನ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಬಳಿಕ ಮಾಲ್ವಾನ್ ಪುರಸಭೆ ಬಾಲಕನ ಕುಟುಂಬಕ್ಕೆ ಆಧಾರವಾಗಿದ್ದ ಗುಜಿರಿ ಅಂಗಡಿಯನ್ನು ಕೂಡ ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ.







