ಪತ್ರಿಕಾ ಸ್ವಾತಂತ್ರ್ಯ ಕುಗ್ಗುತ್ತಿದೆ, ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ: ಡಚ್ ಪ್ರಧಾನಿ ಹೇಳಿಕೆಗೆ ಭಾರತ ತಿರುಗೇಟು

Photo| NDTV
ಹೇಗ್, ಮೇ 19: ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಸಿಯುತ್ತಿದೆ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳು ಕುಗ್ಗುತ್ತಿದೆ ಎಂಬ ಡಚ್ ಪ್ರಧಾನಿ ರಾಬ್ ಜೆಟ್ಟನ್ ಅವರ ಹೇಳಿಕೆಯನ್ನು ಭಾರತ ಬಲವಾಗಿ ವಿರೋಧಿಸಿದ್ದು, ದೇಶವು ಎಲ್ಲರಿಗೂ ಮುಕ್ತ ಅಭಿವ್ಯಕ್ತಿಯ ಹಕ್ಕು ನೀಡುವ “ಚೈತನ್ಯಶೀಲ ಪ್ರಜಾಪ್ರಭುತ್ವ” ಹೊಂದಿದೆ ಎಂದು ಪ್ರತಿಪಾದಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೆದರ್ಲ್ಯಾಂಡ್ಸ್ ಭೇಟಿಯ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್, ಇಂತಹ ಪ್ರಶ್ನೆಗಳು ಭಾರತದ ಬಗ್ಗೆ ಇರುವ “ತಿಳುವಳಿಕೆಯ ಕೊರತೆ”ಯಿಂದ ಉದ್ಭವಿಸುತ್ತವೆ ಎಂದು ಹೇಳಿದರು.
“ಈ ರೀತಿಯ ಪ್ರಶ್ನೆಗಳು ಪ್ರಶ್ನೆ ಕೇಳುವವರ ಭಾರತದ ಕುರಿತ ಅರಿವಿನ ಕೊರತೆಯನ್ನು ತೋರಿಸುತ್ತವೆ” ಎಂದು ಅವರು ಹೇಳಿದರು.
ಭಾರತವು ಐದು ಸಾವಿರ ವರ್ಷಗಳಿಗೂ ಹಳೆಯ ನಾಗರಿಕತೆಯನ್ನು ಹೊಂದಿರುವ ವೈವಿಧ್ಯಮಯ ದೇಶ ಎಂದು ಜಾರ್ಜ್ ಹೇಳಿದರು.
“ಭಾರತವು 1.4 ಶತಕೋಟಿ ಜನರ ದೇಶ. ಸಂಸ್ಕೃತಿ, ಭಾಷೆ, ಆಹಾರ ಮತ್ತು ಧರ್ಮದ ವಿಷಯದಲ್ಲಿ ಅಪಾರ ವೈವಿಧ್ಯತೆ ಇದೆ. ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮ ಸೇರಿದಂತೆ ನಾಲ್ಕು ಪ್ರಮುಖ ಧರ್ಮಗಳು ಭಾರತದಲ್ಲೇ ಹುಟ್ಟಿಕೊಂಡಿವೆ” ಎಂದು ಹೇಳಿದರು.
ಯಹೂದಿ ಸಮುದಾಯವು 2,500 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಯಾವುದೇ ಕಿರುಕುಳವಿಲ್ಲದೆ ನೆಲೆಸಿತ್ತು ಎಂದು ಅವರು ಉಲ್ಲೇಖಿಸಿದರು.
“ಕ್ರೈಸ್ತ ಧರ್ಮ ಭಾರತಕ್ಕೆ ಯೇಸುಕ್ರಿಸ್ತನ ಪುನರುತ್ಥಾನದ ಬಳಿಕ ಬಂದಿದೆ. ಇಸ್ಲಾಂ ಧರ್ಮ ಪ್ರವಾದಿ ಮುಹಮ್ಮದ್ ಅವರ ಕಾಲದಲ್ಲೇ ಭಾರತಕ್ಕೆ ಬಂದಿದೆ. ಎರಡೂ ಧರ್ಮಗಳು ಇಲ್ಲಿ ಅಭಿವೃದ್ಧಿಯಾಗಿದೆ” ಎಂದರು.
ಪ್ರಧಾನಿ ಮೋದಿ ಅವರ ಎರಡು ದಿನಗಳ ನೆದರ್ಲ್ಯಾಂಡ್ಸ್ ಪ್ರವಾಸದ ವೇಳೆ ಜಂಟಿ ಪತ್ರಿಕಾಗೋಷ್ಠಿ ಏಕೆ ನಡೆದಿಲ್ಲ ಎಂದು ಡಚ್ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು. ಇದೇ ವೇಳೆ ಪತ್ರಿಕಾ ಸ್ವಾತಂತ್ರ್ಯ ಹಾಗೂ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ಕುರಿತು ಕಳವಳ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ಉಲ್ಲೇಖಿಸಿದ ಜಾರ್ಜ್, ಭಾರತವು “ಬಲಿಷ್ಠ ಪ್ರಜಾಪ್ರಭುತ್ವ”ವಾಗಿದ್ದು, “ಶಾಂತಿಯುತ ಅಧಿಕಾರ ವರ್ಗಾವಣೆ” ಅದರ ಪ್ರಮುಖ ಲಕ್ಷಣವಾಗಿದೆ ಎಂದು ಹೇಳಿದರು.
“ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 90 ಶೇಕಡಕ್ಕೂ ಹೆಚ್ಚು ಮತದಾರರು ಮತಚಲಾಯಿಸಿದ್ದಾರೆ. ಇದೇ ಭಾರತದ ಸೌಂದರ್ಯ” ಎಂದರು.
ಪ್ರಜಾಪ್ರಭುತ್ವದ ತತ್ವಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಭಾರತ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
“ಬಡತನ ನಿರ್ಮೂಲನೆಗಾಗಿ ನಾವು ಹಿಂಸಾಚಾರದ ಮಾರ್ಗ ಅನುಸರಿಸಲಿಲ್ಲ. ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೂಲಕವೇ ಬಡತನ ಕಡಿಮೆ ಮಾಡುವ ಪ್ರಯತ್ನ ನಡೆಸಿದ್ದೇವೆ” ಎಂದರು.
“ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗ ಭಾರತದಲ್ಲಿದೆ. ಆದರೆ ವಿಶ್ವದ ಸಮಸ್ಯೆಗಳ ಆರನೇ ಒಂದು ಭಾಗವೂ ಭಾರತದಲ್ಲಿಲ್ಲ. ಇದೇ ಭಾರತದ ವೈಶಿಷ್ಟ್ಯ” ಎಂದು ಹೇಳಿದರು.
ಸ್ವಾತಂತ್ರ್ಯದ ಸಮಯದಲ್ಲಿ ಭಾರತದಲ್ಲಿದ್ದ ಅಲ್ಪಸಂಖ್ಯಾತರ ಜನಸಂಖ್ಯೆ ಶೇಕಡಾ 11ರಷ್ಟಿತ್ತು. ಈಗ ಅದು ಶೇಕಡಾ 20ಕ್ಕಿಂತ ಹೆಚ್ಚಾಗಿದೆ ಎಂದು ಜಾರ್ಜ್ ಹೇಳಿದರು. ಅಲ್ಪಸಂಖ್ಯಾತ ಸಮುದಾಯಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಭಾರತ ಪ್ರಮುಖ ಉದಾಹರಣೆ ಎಂದರು.
ಡಚ್ ಪ್ರಧಾನಿ ಏನು ಹೇಳಿದರು?
ಡಚ್ ಪತ್ರಿಕೆ ಡಿ ವೋಕ್ಸ್ಕ್ರಾಂಟ್ ವರದಿ ಪ್ರಕಾರ, ಪ್ರಧಾನಿ ಮೋದಿಯನ್ನು ಭೇಟಿಯಾಗುವ ಮೊದಲು ಜೆಟ್ಟನ್ ಅವರು, “ಭಾರತದಲ್ಲಿನ ಬೆಳವಣಿಗೆಗಳ ಕುರಿತು ಡಚ್ ಸರಕಾರಕ್ಕೆ ಕಳವಳವಿದೆ. ಅದು ಕೇವಲ ಪತ್ರಿಕಾ ಸ್ವಾತಂತ್ರ್ಯದ ವಿಷಯವಲ್ಲ, ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಒತ್ತಡದ ವಿಚಾರವೂ ಹೌದು” ಎಂದು ಹೇಳಿದ್ದರು ಎನ್ನಲಾಗಿದೆ.
ಈ ಕಳವಳಗಳನ್ನು ಭಾರತ ಸರಕಾರದೊಂದಿಗೆ “ನಿಯಮಿತವಾಗಿ ಪ್ರಸ್ತಾಪಿಸಲಾಗುತ್ತಿದೆ” ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಜೆಟ್ಟನ್, “ಭಾರತ ಮತ್ತು ನೆದರ್ಲ್ಯಾಂಡ್ಸ್ ಎರಡೂ ಪ್ರಜಾಪ್ರಭುತ್ವ, ಸುಶಾಸನ ಹಾಗೂ ನಿಯಮ ಮತ್ತು ನ್ಯಾಯಾಧಾರಿತ ಜಾಗತಿಕ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡುತ್ತವೆ” ಎಂದು ಹೇಳಿದ್ದಾರೆ.






