ಬಲೂಚಿಸ್ತಾನದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಕೈವಾಡವಿದೆ ಎಂಬ ಪಾಕ್ ಆರೋಪವನ್ನು ಬಲವಾಗಿ ತಿರಸ್ಕರಿಸಿದ ಭಾರತ

Photo | PTI
ಹೊಸದಿಲ್ಲಿ : ಬಲೂಚಿಸ್ತಾನದಲ್ಲಿ ಶಾಲಾ ಬಸ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನ ಸೇನೆಯ ಆಧಾರರಹಿತ ಆರೋಪಗಳನ್ನು ಭಾರತ ಬುಧವಾರ ತಿರಸ್ಕರಿಸಿದೆ.
ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಖ್ಯಾತಿ ಹೊಂದಿರುವುದರಿಂದ ಅಂತಹ ಹೇಳಿಕೆಗಳನ್ನು ನೀಡುವುದು ಅವರ ಸ್ವಭಾವವಾಗಿದೆ ಎಂದು ಹೇಳಿದೆ.
ಖುಜ್ದಾರ್ನಲ್ಲಿ ಶಾಲಾ ಬಸ್ನಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಆರು ಜನರು ಮೃಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡರು ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಹೇಳಿದ್ದರು.
ಪಾಕಿಸ್ತಾನದ ಮಿಲಿಟರಿ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಮಾಡಿದ ಆಧಾರರಹಿತ ಆರೋಪಗಳನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಬಲವಾಗಿ ನಿರಾಕರಿಸಿದರು.
ಈ ಘಟನೆಯಲ್ಲಿ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ತಳ್ಳಿಹಾಕಿದ ಜೈಸ್ವಾಲ್, ಇಂತಹ ಘಟನೆಗಳಲ್ಲಿ ಸಂಭವಿಸಿದ ಜೀವಹಾನಿಗೆ ಭಾರತ ಸಂತಾಪ ವ್ಯಕ್ತಪಡಿಸುತ್ತದೆ. ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು ಎಂಬ ತನ್ನ ಖ್ಯಾತಿಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ತನ್ನದೇ ಆದ ಘೋರ ವೈಫಲ್ಯಗಳನ್ನು ಮರೆಮಾಡಲು ಪಾಕಿಸ್ತಾನ ತನ್ನ ಎಲ್ಲಾ ಆಂತರಿಕ ಸಮಸ್ಯೆಗಳಿಗೆ ಭಾರತವನ್ನು ದೂಷಿಸುವುದು ಅದರ ಸ್ವಭಾವವಾಗಿದೆ. ಜಗತ್ತನ್ನು ವಂಚಿಸುವ ಈ ಪ್ರಯತ್ನ ವಿಫಲವಾಗುವುದು ಖಚಿತ ಎಂದು ಹೇಳಿದರು.







