ಫಾಸ್ಟ್ಯಾಗ್ ಯುಗ ಅಂತ್ಯ?: ಮೇ 1ರಿಂದ ಟೋಲ್ ಸಂಗ್ರಹಕ್ಕೆ ಹೊಸ ವ್ಯವಸ್ಥೆ ಜಾರಿ

Photo: PTI
ಹೊಸದಿಲ್ಲಿ: ಟೋಲ್ ಸಂಗ್ರಹವನ್ನು ಸುಗಮಗೊಳಿಸಲು ಮತ್ತು ಎಲ್ಲರಿಗೂ ಹೆಚ್ಚು ಅನುಕೂಲಕರವನ್ನಾಗಿಸಲು ಸರಕಾರವು ಹೆಚ್ಚು ಸುಧಾರಿತ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವಿಧಾನವನ್ನು ಕಾರ್ಯಗತಗೊಳಿಸಲು ಸಜ್ಜಾಗಿದೆ. ವರದಿಗಳ ಪ್ರಕಾರ ಭವಿಷ್ಯದ ಟೋಲ್ ಸಂಗ್ರಹ ತಂತ್ರಜ್ಞಾನವು ಮೇ 1ರಿಂದ ಹಂತಹಂತವಾಗಿ ಕಾರ್ಯರೂಪಕ್ಕೆ ಬರಲಿದ್ದು,ಪ್ರಸ್ತುತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಬದಲಿಸಲಿದೆ.
ವರದಿಯಂತೆ ಪ್ರಸ್ತುತ ಟೋಲ್ ಸಂಗ್ರಹ ವ್ಯವಸ್ಥೆಗೆ ಹೋಲಿಸಿದರೆ ನೂತನ ವ್ಯವಸ್ಥೆಯು ಅತ್ಯಂತ ಸುಲಭ,ಹೆಚ್ಚು ವೇಗ ಮತ್ತು ಪಾರದರ್ಶಕವಾಗಿರಲಿದೆ. ಅದು ದೀರ್ಘ ಸರದಿ ಸಾಲುಗಳನ್ನು ನಿವಾರಿಸುವ ಮೂಲಕ ಸಾರ್ವಜನಿಕರಿಗೆ ಸಮಯವನ್ನು ಉಳಿಸಲು ಮತ್ತು ಟೋಲ್ಬೂತ್ನ್ನು ತ್ವರಿತವಾಗಿ ಹಾದುಹೋಗಲು ನೆರವಾಗಲಿದೆ.
ಹೆದ್ದಾರಿ ಮಾಫಿಯಾಗಳಿಂದ ಟ್ಯಾಗ್ ಗಳ ದುರುಪಯೋಗಕ್ಕೆ ಕಡಿವಾಣ ಹಾಕಲು ಉಪಗ್ರಹ ಆಧಾರಿತ ತಂತ್ರಜ್ಞಾನ ಬೆಂಬಲಿತ ನೂತನ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಇದು ಟ್ಯಾಗ್ ಗಳಲ್ಲಿಯ ದೋಷಗಳಿಗೆ ಸಂಬಂಧಿತ ಸಮಸ್ಯೆಗಳಿಲ್ಲದೆ ಟೋಲ್ ತೆರಿಗೆಯನ್ನು ಪಾವತಿಸಲು ಸುಧಾರಿತ ಮಾರ್ಗವನ್ನು ತೆರೆಯಲಿದೆ ಎಂದು ವರದಿಗಳು ಸೂಚಿಸಿವೆ.
ನೂತನ ವ್ಯವಸ್ಥೆಯು ದೂರದಿಂದಲೇ ಟೋಲ್ ಶುಲ್ಕಗಳನ್ನು ಕಡಿತಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ತನ್ಮೂಲಕ ಟೋಲ್ ಬೂತ್ ಗಳಲ್ಲಿ ತಪ್ಪು ನಿರ್ವಹಣೆ, ವಂಚನೆ ಇತ್ಯಾದಿಗಳನ್ನು ಸಾರ್ವಜನಿಕರು ತಪ್ಪಿಸಬಹುದಾಗಿದೆ.
ಇತ್ತೀಚಿನ ಟೋಲ್ ಬೂತ್ ತಂತ್ರಜ್ಞಾನವು ಶುಲ್ಕ ವಿಧಿಸಬಹುದಾದ ಹೆದ್ದಾರಿಯಲ್ಲಿ ಚಲಿಸುತ್ತಿರುವ ವಾಹನಗಳನ್ನು ಪತ್ತೆ ಹಚ್ಚಲು ಜಿಪಿಎಸ್ ತಂತ್ರಜ್ಞಾನವನ್ನು ಬಳಸುತ್ತದೆ. ಈ ವ್ಯವಸ್ಥೆಯು ಎಎನ್ಪಿಆರ್ (ಸ್ವಯಂಚಾಲಿತವಾಗಿ ನಂಬರ್ ಪ್ಲೇಟ್ ಗಳ ಗುರುತಿಸುವಿಕೆ) ಕ್ಯಾಮೆರಾವನ್ನೂ ಹೊಂದಿರಲಿದೆ. ಅದು ಜಿಪಿಎಸ್ ಸಾಧನಗಳನ್ನು ಅಳವಡಿಸಲಾದ ವಾಹನಗಳನ್ನು ಸೆರೆ ಹಿಡಿಯುತ್ತದೆ ಮತ್ತು ನೈಜ ಸಮಯದಲ್ಲಿ ಟೋಲ್ ಶುಲ್ಕಗಳನ್ನು ಕಡಿತಗೊಳಿಸುತ್ತದೆ.