ಅಮೆರಿಕದ ದಿಗ್ಬಂಧನದ ಹೊರತಾಗಿಯೂ ರಶ್ಯ ದಿಂದ ಭಾರತ ತೈಲ ಖರೀದಿಸುತ್ತಿದೆ: ಕೇಂದ್ರ ಸರಕಾರ

Photo Credit : ANI
ಹೊಸದಿಲ್ಲಿ: ಅಮೆರಿಕ ಹೇರಿದ್ದ ದಿಗ್ಬಂಧನದ ನಡುವೆಯೂ ಭಾರತ ರಶ್ಯದಿಂದ ಕಚ್ಚಾ ತೈಲ ಖರೀದಿಯನ್ನು ಮುಂದುವರಿಸಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ‘ದಿಗ್ಬಂಧನ ತೆರವಿಗೆ ಮುನ್ನವೂ ಭಾರತ ರಶ್ಯದಿಂದ ತೈಲ ಖರೀದಿಸುತ್ತಿತ್ತು. ದಿಗ್ಬಂಧನ ಸಡಿಲಿಕೆ ಅವಧಿಯಲ್ಲಿಯೂ ಖರೀದಿ ಮುಂದುವರಿದಿತ್ತು. ಈಗಲೂ ರಶ್ಯದಿಂದ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
‘ತೈಲ ಖರೀದಿಯಲ್ಲಿ ವಾಣಿಜ್ಯ ಹಿತಾಸಕ್ತಿಯೇ ಮುಖ್ಯವಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಕೊರತೆ ಇಲ್ಲ. ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ಪ್ರಮಾಣದ ತೈಲ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ದಿಗ್ಬಂಧನ ಇರಲಿ, ಇಲ್ಲದಿರಲಿ, ಅದರಿಂದ ಭಾರತದ ಖರೀದಿ ನೀತಿಗೆ ಯಾವುದೇ ಪರಿಣಾಮವಾಗುವುದಿಲ್ಲ’ ಎಂದು ತಿಳಿಸಿದರು.
ಇರಾನ್ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವ ಹಿನ್ನೆಲೆ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತೈಲ ಪೂರೈಕೆಯನ್ನು ಸುಗಮಗೊಳಿಸುವ ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಶ್ಯದ ಸಮುದ್ರ ಮಾರ್ಗದ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತ ಸೇರಿದಂತೆ ಕೆಲವು ದೇಶಗಳ ಮೇಲಿದ್ದ ದಿಗ್ಬಂಧನವನ್ನು ಅಮೆರಿಕ ಶನಿವಾರ ತೆರವುಗೊಳಿಸಿತ್ತು.
ರಶ್ಯದ ಸಮುದ್ರ ಮಾರ್ಗದ ಕಚ್ಚಾ ತೈಲವನ್ನು ಅತಿ ಹೆಚ್ಚು ಖರೀದಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಈ ಹಿಂದೆ ಅಮೆರಿಕ ದಿಗ್ಬಂಧನ ಸಡಿಲಿಕೆ ನೀಡಿದ್ದ ಸಂದರ್ಭದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತ ದಾಖಲೆ ಪ್ರಮಾಣದಲ್ಲಿ ರಶ್ಯನ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು.






