ಸೌದಿ ಜೊತೆಗೆ ರಸಗೊಬ್ಬರ ಪೂರೈಕೆ ಒಪ್ಪಂದ ಮಾಡಿಕೊಂಡ ಭಾರತ

PC: x.com/JPNadda
ಹೊಸದಿಲ್ಲಿ: ಮುಂದಿನ ಐದು ವರ್ಷಗಳ ಕಾಲ 31 ಲಕ್ಷ ಟನ್ ರಸಗೊಬ್ಬರವನ್ನು ಭಾರತಕ್ಕೆ ಪೂರೈಕೆ ಮಾಡುವ ಒಪ್ಪಂದಕ್ಕೆ ಸೌದಿ ಗಣಿಗಾರಿಕಾ ಕಂಪನಿ ಮಾಡೆನ್ ಮತ್ತು ಭಾರತೀಯ ಕಂಪನಿಗಳಾದ ಐಪಿಎಲ್, ಕ್ರಿಬ್ಕೊ (KRIBHCO) ಮತ್ತು ಸಿಐಎಲ್ ಸಹಿ ಮಾಡಿವೆ. ಪರಸ್ಪರ ಸಹಮತದ ಮೇರೆಗೆ ಮತ್ತೆ ಐದು ವರ್ಷಗಳಿಗೆ ಒಪ್ಪಂದವನ್ನು ವಿಸ್ತರಿಸಲು ಅವಕಾಶವಿದೆ.
ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಜೆ.ಪಿ.ನಡ್ಡಾ ಅವರು ಸೌದಿ ಅರೇಬಿಯಾಕ್ಕೆ ನೀಡಿದ ಐತಿಹಾಸಿಕ ಭೇಟಿ ವೇಳೆ ಈ ಒಪ್ಪಂದಕ್ಕೆ ಬರಲಾಗಿದೆ.
ದೇಶದ ಆಹಾರ ಭದ್ರತೆ ದೃಷ್ಟಿಯಿಂದ ಪ್ರಮುಖವಾದ ಡಿಎಪಿ ರಸಗೊಬ್ಬರದ ಲಭ್ಯತೆ ಮಧ್ಯಮಾವಧಿ ಹಾಗೂ ಧೀರ್ಘಾವಧಿಯಲ್ಲಿ ಸಮರ್ಪಕವಾಗಿ ಲಭ್ಯವಾಗುವಂತೆ ಖಾತರಿಪಡಿಸುವ ಸಲುವಾಗಿ ಈ ಒಪ್ಪಂದಕ್ಕೆ ಬರಲಾಗಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಡಿಎಪಿ ಪೂರೈಕೆಗೆ ಭಾರತ ಚೀನಾವನ್ನು ಅವಲಂಬಿಸಿದ್ದು, ಭಾರತದಲ್ಲಿ ಯೂರಿಯಾ ಬಳಿಕ ಹೆಚ್ಚು ಬಳಕೆಯಲ್ಲಿರುವ ಗೊಬ್ಬರಕ್ಕಾಗಿ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಚಿಂತನೆ ನಡೆಸಿದೆ.
ರಸಗೊಬ್ಬರ ಪೂರೈಕೆಯಲ್ಲಿ ನಿರ್ಬಂಧಗಳನ್ನು ವಿಧಿಸುವ ದೃಷ್ಟಿಕೋನ ಕೆಲ ದೇಶಗಳಿಂದ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮಿತ್ರ ಹಾಗೂ ಪಾಲುದಾರ ರಿಯಾದ್ ನಿಂದ ಬಂದ ಬದ್ಧತೆಯ ಹಿನ್ನೆಲೆಯಲ್ಲಿ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಹಾಗೂ ಭವಿಷ್ಯದ ಹೂಡಿಕೆಗಳಲ್ಲಿ ಸಹಭಾಗಿತ್ವ ಸ್ಥಾಪಿಸುವ ನಿಟ್ಟಿನಲ್ಲಿ ಒಪ್ಪಂದಕ್ಕೆ ಬರಲಾಗಿದೆ ಎಂದು ಚೀನಾವನ್ನು ಹೆಸರಿಸದೇ ಅಧಿಕಾರಿಗಳು ವಿವರಿಸಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಮೋದಿ ಭೇಟಿ ನೀಡಿದ ಬಳಿಕ ಇದೀಗ ನಡ್ಡಾ ನೀಡಿರುವ ಭೇಟಿ ಸೌದಿ ಜತೆಗಿನ ಈ ಪ್ರಮುಖ ಪಾಲುದಾರಿಕೆಯನ್ನು ಮತ್ತಷ್ಟು ಬಲಗೊಳಿಸಲು ಸಹಕಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







