ಬಾಂಗ್ಲಾ ರಾಯಭಾರಿಗೆ ಭಾರತ ಸಮನ್ಸ್: ಸಂಬಂಧದಲ್ಲಿ ಋಣಾತ್ಮಕತೆ ಹರಡುವ ಪ್ರಯತ್ನಕ್ಕೆ ಖಂಡನೆ

ರಣಧೀರ್ ಜೈಸ್ವಾಲ್ PC: x.com/thewire_in
ಹೊಸದಿಲ್ಲಿ: ಢಾಕಾದಲ್ಲಿ ಶೇಖ್ ಮುಜೀಬುರ್ ರಹಮಾನ್ ಅವರ ಐತಿಹಾಸಿಕ ನಿವಾಸವನ್ನು ಧ್ವಂಸಗೊಳಿಸಿದ ಕ್ರಮವನ್ನು ಬಲವಾಗಿ ಖಂಡಿಸಿರುವ ಭಾರತ ಶುಕ್ರವಾರ ಬಾಂಗ್ಲಾದೇಶದ ಹಂಗಾಮಿ ಹೈಕಮಿಷನ್ ನೂರುಲ್ ಇಸ್ಲಾಂ ಅವರನ್ನು ಕರಸಿಕೊಂಡ ಭಾರತ ತನ್ನ ಬಲವಾದ ಆಕ್ಷೇಪವನ್ನು ಸಲ್ಲಿಸಿದೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಚಂಚಲಗೊಳಿಸಲು ಮತ್ತು ಸಂಬಂಧದಲ್ಲಿ ಋಣಾತ್ಮಕತೆಯನ್ನು ಹರಡುವ ಢಾಕಾ ನಾಯಕರ ಪ್ರಯತ್ನ ವಿಷಾದನೀಯ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಈ ಮಧ್ಯೆ ಬಾಂಗ್ಲಾದ ಪದಚ್ಯುತ ಪ್ರಧಾನಿ ನೀಡಿರುವ ಹೇಳಿಕೆಯಿಂದಲೂ ಭಾರತ ಅಂತರ ಕಾಯ್ದುಕೊಂಡಿದೆ. ಹಸೀನಾ ಹೇಳಿಕೆ ಬಗ್ಗೆ ಬಾಂಗ್ಲಾದೇಶ ಈಗಾಗಲೇ ಭಾರತಕ್ಕೆ ತನ್ನ ಆಕ್ಷೇಪವನ್ನು ಸಲ್ಲಿಸಿದೆ. "ಹಸೀನಾ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಇದರಲ್ಲಿ ಭಾರತದ ಪ್ರಯತ್ನ ಏನೂ ಇಲ್ಲ" ಎಂದು ಭಾರತ ಸ್ಪಷ್ಟಪಡಿಸಿದೆ. "ಈ ಹೇಳಿಕೆಯನ್ನು ಭಾರತ ಸರ್ಕಾರದ ನಿಲುವಿಗೆ ಸಮನ್ವಯಗೊಳಿಸುವುದರಿಂದ ದ್ವಿಪಕ್ಷೀಯ ಸಂಬಂಧಕ್ಕೆ ಧನಾತ್ಮಕತೆ ಸೇರಿಸಲು ಯಾವುದೇ ನೆರವಾಗಲಾರದು" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಬಾಂಗ್ಲಾದೇಶದ ಜತೆ ಧನಾತ್ಮಕ, ರಚನಾತ್ಮಕ ಹಾಗೂ ಪರಸ್ಪರ ಲಾಭ ತರುವ ಸಂಬಂಧವನ್ನು ಭಾರತ ಅಪೇಕ್ಷಿಸಿದೆ. ಹಲವು ಸುತ್ತಿನ ಉನ್ನತ ಮಟ್ಟದ ಸಭೆಗಳಲ್ಲಿ ಇದನ್ನು ಪುನರುಚ್ಚರಿಸಲಾಗಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಭಾರತವನ್ನು ಋಣಾತ್ಮಕವಾಗಿ ಬಿಂಬಿಸುವ ಹೇಳಿಕೆಗಳನ್ನು ಬಾಂಗ್ಲಾ ಅಧಿಕಾರಿಗಳು ನೀಡುತ್ತಿರುವುದು ವಿಷಾಯದನೀಯ. ತಮ್ಮ ಆಂತರಿಕ ಆಡಳಿತ ಸಮಸ್ಯೆಗಳಿಗೆ ಭಾರತವನ್ನು ಹೊಣೆ ಮಾಡುವುದು ಸರಿಯಲ್ಲ. ಬಾಂಗ್ಲಾದೇಶದ ಇಂಥ ಹೇಳಿಕೆಗಳು ಋಣಾತ್ಮಕತೆಗೆ ಕಾರಣವಾಗುತ್ತವೆ ಎಂದು ಅವರು ಖಂಡತುಂಡವಾಗಿ ಹೇಳಿದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28







