ಉಲ್ಬಣಗೊಂಡ ಬಿಕ್ಕಟ್ಟು: ಕೆನಡಾ ಪ್ರಜೆಗಳಿಗೆ ವೀಸಾ ಸೇವೆ ಅಮಾನತುಗೊಳಿಸಿದ ಭಾರತ
Photo: X/@JustinTrudeau
ಹೊಸದಿಲ್ಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿರುವುದರಿಂದ ಭಾರತ-ಕೆನಡಾ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ರಾಜತಾಂತ್ರಿಕ ವಿವಾದವೂ ತಲೆದೋರಿದೆ.
ಕೆನಡಾ ಪ್ರಜೆಗಳಿಗೆ ವೀಸಾ ಸೇವೆಯನ್ನು ಅಮಾನತುಗೊಳಿಸಿರುವ ಕುರಿತು ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ ಬಿಎಲ್ಎಸ್ ಇಂಟರ್ ನ್ಯಾಶನಲ್ ಸಂಸ್ಥೆಯು ಕೆನಡಿಯನ್ ಅಂತರ್ಜಾಲ ತಾಣದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದೆಯಾದರೂ, ಈ ಕುರಿತು ಯಾವುದೇ ಔಪಚಾರಿಕ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.
“ಭಾರತಕ್ಕೆ ಪ್ರವಾಸ ಕೈಗೊಳ್ಳುವವರಿಗೆ ವಿಶೇಷ ಸೂಚನೆ: ಕಾರ್ಯಾಚರಣೆ ಕಾರಣಗಳಿಂದ, ಮುಂದಿನ ಸೂಚನೆಯವರೆಗೆ ಸೆಪ್ಟೆಂಬರ್ 21, 2023ರಿಂದ ಭಾರತೀಯ ವೀಸಾ ಸೇವೆಗಳನ್ನು ಅಮಾನತುಗೊಳಿಸಲಾಗಿದೆ” ಎಂದು ಆ ಸಂದೇಶದಲ್ಲಿ ಹೇಳಲಾಗಿದೆ.
ವೀಸಾ ಸೇವೆ ಅಮಾನತು ಸುದ್ದಿಯನ್ನು ದೃಢಪಡಿಸಿರುವ ಭಾರತೀಯ ಅಧಿಕಾರಿಯೊಬ್ಬರು, ಈ ಕುರಿತು ಹೆಚ್ಚು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. “ಬಳಸಲಾಗಿರುವ ಭಾಷೆಯು ಸ್ಪಷ್ಟವಾಗಿದೆ ಮತ್ತು ಏನು ಹೇಳಲು ಬಯಸಲಾಗಿತ್ತೊ ಅದನ್ನು ಹೇಳಲಾಗಿದೆ” ಎಂದು ಅವರು ಸೂಚ್ಯವಾಗಿ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ನಂತರ ಇದೇ ಪ್ರಥಮ ಬಾರಿಗೆ ಭಾರತವು ಕೆನಡಾ ಪ್ರಜೆಗಳಿಗೆ ವೀಸಾ ಸೇವೆಯನ್ನು ಅಮಾನತುಗೊಳಿಸಿದೆ.