ನಾಳೆಯಿಂದ ಭಾರತ-ಟೋಗೊ ಡೇವಿಸ್ ಕಪ್ ಪಂದ್ಯ

PC : indiatoday.in
ಹೊಸದಿಲ್ಲಿ: ಡೇವಿಸ್ ಕಪ್ ವಿಶ್ವ ಗುಂಪು ಒಂದು ಪ್ಲೇ-ಆಫ್ನಲ್ಲಿ ಟೋಗೊ ದೇಶವನ್ನು ಎದುರಿಸಲು ಭಾರತವು ಸಿದ್ಧತೆಗಳನ್ನು ನಡೆಸುತ್ತಿರುವಂತೆಯೇ, ಶಶಿಕುಮಾರ್ ಮುಕುಂದ್ ಭಾರತೀಯ ಡೇವಿಸ್ ಕಪ್ ತಂಡಕ್ಕೆ ಮರಳಲು ವೇದಿಕೆ ಸಿದ್ಧವಾಗಿದೆ.
ಭಾರತ-ಟೋಗೊ ಪಂದ್ಯವು ಹೊಸದಿಲ್ಲಿಯ ಡಿಎಲ್ಟಿಎ ಕಾಂಪ್ಲೆಕ್ಸ್ನಲ್ಲಿ ಶನಿವಾರ ಆರಂಭಗೊಳ್ಳುತ್ತದೆ.
ಒಂದು ಕಾಲದಲ್ಲಿ, ಮುಕುಂದ್ರನ್ನು ಭರವಸೆಯ ಪ್ರತಿಭೆ ಎಂಬುದಾಗಿ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಶ್ಲಾಘಿಸಿದ್ದರು. ಆದರೆ, ಬಳಿಕ ಗಾಯಗಳು ಮತ್ತು ವಿವಾದಗಳಿಂದಾಗಿ ಅವರ ಟೆನಿಸ್ ಬದುಕು ಹಿನ್ನಡೆ ಕಂಡಿತು.
2023ರ ಸೆಪ್ಟಂಬರ್ನಲ್ಲಿ ತನ್ನ ಚೊಚ್ಚಲ ಡೇವಿಸ್ ಕಪ್ನಲ್ಲಿ ಆಡಿದ ಬಳಿಕ ಅವರನ್ನು ಅಮಾನತಿನಲ್ಲಿಡಲಾಗಿತ್ತು. ಆದರೆ, ಅದನ್ನು ಪ್ರಕಟಿಸಲಾಗಿರಲಿಲ್ಲ. ಈಗ 28 ವರ್ಷದ ಮುಕುಂದ್ ಆಸ್ಟ್ರಿಯದಲ್ಲಿ ತರಬೇತಿ ಪಡೆಯುತ್ತಿದ್ದು, ಸುಮಿತ್ ನಾಗಲ್ರ ಅನುಪಸ್ಥಿತಿಯಲ್ಲಿ ತಂಡಕ್ಕೆ ಮರಳಿ ತನ್ನ ಚೊಚ್ಚಲ ಡೇವಿಸ್ ಕಪ್ ಜಯವನ್ನು ಪಡೆಯುವ ಹಂಬಲದಲ್ಲಿದ್ದಾರೆ.
ಕಡಿಮೆ ರ್ಯಾಂಕಿಂಗ್ ಹೊಂದಿರುವ ಟೋಗೊ ವಿರುದ್ಧ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮುಕುಂದ್, ಲಿಯೋವ ಅಯಿಟೆ ಅಜವೊನ್ ವಿರುದ್ಧ ಮೊದಲ ಸಿಂಗಲ್ಸ್ ಪಂದ್ಯ ಆಡಲಿದ್ದಾರೆ. ಬಳಿಕ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ರಾಮನಾಥನ್, ಥಾಮಸ್ ಸೆಟೋಜಿಯನ್ನು ಎದುರಿಸಲಿದ್ದಾರೆ.
ಟೋಗೊ ತನ್ನ ಈವರೆಗಿನ 11 ಪಂದ್ಯಗಳಲ್ಲಿ 10ನ್ನು ಗೆದ್ದು ತೀವ್ರ ಸ್ಪರ್ಧೆಯನ್ನು ಒಡ್ಡಿದೆ. ಆದರೆ ಅದು ಭಾರತದಂಥ ಹೆಚ್ಚಿನ ರ್ಯಾಂಕಿಂಗ್ನ ತಂಡದ ವಿರುದ್ಧ ಈವರೆಗೆ ಆಡಿಲ್ಲ. ಎದುರಾಳಿ ತಂಡದ ಸಾಮರ್ಥ್ಯವನ್ನು ಕೀಳಂದಾಜಿಸುವುದಿಲ್ಲ ಎಂದು ಭಾರತೀಯ ತಂಡದ ನಾಯಕ ರೋಹಿತ್ ರಾಜ್ಪಾಲ್ ಹೇಳಿದ್ದಾರೆ.
ಡಬಲ್ಸ್ನಲ್ಲಿ, ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಿರುವ ಹಾಗೂ ಡಬಲ್ಸ್ ರ್ಯಾಂಕಿಂಗ್ಸ್ನಲ್ಲಿ ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಋತ್ವಿಕ್ ಚೌದರಿ ಬೊಲ್ಲಿಪಲ್ಲಿ, ಎನ್. ಶ್ರೀರಾಮ್ ಬಾಲಾಜಿ ಜೊತೆಗೆ ಆಡಲಿದ್ದಾರೆ.







