ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕೃಷಿ ಆಮದುಗಳಿಗೆ ಅವಕಾಶ ಕಲ್ಪಿಸಿದೆ: ಜೈರಾಮ್ ರಮೇಶ್ ಆರೋಪ

Jairam Ramesh | Photo: PTI
ಹೊಸದಿಲ್ಲಿ,ಫೆ.4: ಭಾರತ-ಅಮೆರಿಕ ನಡುವಿನ ನೂತನ ವ್ಯಾಪಾರ ಒಪ್ಪಂದ ಕುರಿತು ಸರಕಾರದ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್, ಅದು ಪ್ರಮುಖ ವಿವರಗಳನ್ನು ಮರೆಮಾಚಿದೆ ಮತ್ತು ಕೃಷಿ ಆಮದುಗಳಿಗೆ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಘೋಷಿಸಿ ಒಂದು ದಿನವೇ ಕಳೆದಿದ್ದರೂ ಯಾವುದೇ ಅಧಿಕೃತ ವಿವರಗಳನ್ನು ಈವರೆಗೂ ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿಲ್ಲ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, ಭಾರತವು ಕೃಷಿ ಆಮದುಗಳಿಗೆ ಮುಕ್ತ ಅವಕಾಶ ನೀಡಲು ಒಪ್ಪಿಕೊಂಡಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ಈವರೆಗೆ ಯಾವುದೇ ಜಂಟಿ ಹೇಳಿಕೆಯನ್ನು ಹೊರಡಿಸಲಾಗಿಲ್ಲ ಎಂದು ಅವರು ಬೆಟ್ಟು ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಯದ ಮೇರೆಗೆ ಟ್ರಂಪ್ ಒಪ್ಪಂದವನ್ನು ಘೋಷಿಸಿದ್ದಾರೆ ಎಂದು ಅಭಿಪ್ರಾಯಿಸಿರುವ ರಮೇಶ್, ಒಪ್ಪಂದದ ಹಿಂದೆ ರಾಜಕೀಯ ರಾಜಕೀಯ ಉದ್ದೇಶಗಳ ಸುಳಿವು ನೀಡಿದರು.
ಮೋದಿ ಸರಕಾರವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದೊಂದಿಗೆ ಭಾರತದ ವ್ಯಾಪಾರ ಒಪ್ಪಂದಗಳ ಕುರಿತು ಸಂಸತ್ತಿಗೆ ಸಂಪೂರ್ಣ ಮಾಹಿತಿ ನೀಡಬೇಕೆಂಬ ಕಾಂಗ್ರೆಸ್ ಪಕ್ಷದ ಆಗ್ರಹದ ಹಿನ್ನೆಲೆಯಲ್ಲಿ ರಮೇಶ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.
ಈ ಕುರಿತ ಪ್ರತ್ಯೇಕ ಎಕ್ಸ್ ಪೋಸ್ಟ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಸುಂಕಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಸತ್ತನ್ನು ಎದುರಿಸಲು ಮೋದಿಯವರು ಸಿದ್ಧರಿಲ್ಲ ಎಂದು ಆರೋಪಿಸಿದ್ದಾರೆ.






