ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದೆ: ಎಸ್.ಜೈಶಂಕರ್

ವಿದೇಶಾಂಗ ಸಚಿವ ಎಸ್. ಜೈಶಂಕರ್ (Photo: PTI)
ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಬಹುತೇಕ ಅಂತಿಮ ಹಂತ ತಲುಪಿದ್ದು, ಒಪ್ಪಂದಕ್ಕೆ ಸಂಬಂಧಿಸಿದ ಬಹುತೇಕ ವಿಚಾರಗಳು ಇತ್ಯರ್ಥವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಶನಿವಾರ ನಡೆದ ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಎಸ್. ಜೈಶಂಕರ್, ಭಾರತವು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗುವ, ಸಮತೋಲಿತ ಹಾಗೂ ಇತರ ಸಮಾನ ಆರ್ಥಿಕತೆಗಳಿಗಿಂತ ಭಾರತಕ್ಕೆ ಸ್ಪರ್ಧಾತ್ಮಕ ಅನುಕೂಲ ಕಲ್ಪಿಸುವ ವ್ಯಾಪಾರ ಒಪ್ಪಂದವನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಪ್ರಧಾನ ಸಂಪಾದಕ ಆರ್. ಸುಕುಮಾರ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಜೈಶಂಕರ್, ಮಾತುಕತೆಗಳು ಅಂತಿಮ ಹಂತದಲ್ಲಿರುವುದು ರಹಸ್ಯವೇನಲ್ಲ. ಶೀಘ್ರದಲ್ಲೇ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದರು.
“ಮಾತುಕತೆಯ ಬಹುತೇಕ ವಿಚಾರಗಳು ಬಗೆಹರಿದಿವೆ. ಈಗ ಉಳಿದಿರುವ ಸಮಸ್ಯೆಗಳಲ್ಲಿ ಹಲವು ನಮ್ಮ ಕಡೆಯಿಂದ ಬಂದಿರುವುದಲ್ಲ. ಅಮೆರಿಕದ ಕಡೆಯಲ್ಲಿನ ಬದಲಾವಣೆಗಳು ಹೆಚ್ಚಾಗಿರುವುದರಿಂದ ಅಲ್ಲಿನ ಕೆಲವು ಆತಂಕಗಳು ಇನ್ನೂ ಬಾಕಿ ಉಳಿದಿವೆ” ಎಂದು ಅವರು ಹೇಳಿದರು.
ಆದರೆ, ಒಪ್ಪಂದ ಯಾವಾಗ ಪೂರ್ಣಗೊಳ್ಳಲಿದೆ ಎಂಬುದಕ್ಕೆ ನಿರ್ದಿಷ್ಟ ಸಮಯವನ್ನು ನೀಡಲು ಅವರು ನಿರಾಕರಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಮಾರುಕಟ್ಟೆಗೆ ಅನುಕೂಲವಾಗುವಂತೆ ಹಲವು ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದದಲ್ಲಿ ಸೂಕ್ತ ಸಮತೋಲನ ಕಂಡುಕೊಳ್ಳುವುದು ಸವಾಲಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.
“ಇದು ತಕ್ಷಣವೇ ಅಥವಾ ಕೆಲವೇ ನಿರ್ಧಾರಗಳಿಂದ ಪೂರ್ಣಗೊಳಿಸಬಹುದಾದ ಪ್ರಕ್ರಿಯೆಯಲ್ಲ. ಇಲ್ಲಿ ಜನರ ಉದ್ಯೋಗ ಮತ್ತು ಜೀವನೋಪಾಯದ ಪ್ರಶ್ನೆಗಳು ಅಡಗಿವೆ. ಆದ್ದರಿಂದ ಪ್ರತಿಯೊಂದು ವಿಚಾರವನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ” ಎಂದರು.
ಭಾರತವು ಪ್ರತಿಯೊಂದು ಸುಂಕ ವಿಭಾಗವನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತಿದ್ದು, ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಮತ್ತು ಪರಿಶ್ರಮ ಬೇಕಾಗುತ್ತದೆ. ಆದರೂ ಮಾತುಕತೆಗಳು ಈಗ ಬಹುತೇಕ ಅಂತಿಮ ಘಟ್ಟ ತಲುಪಿವೆ ಎಂದರು.
ಕಳೆದ ವರ್ಷ ಟ್ರಂಪ್ ಆಡಳಿತವು ಭಾರತದ ರಫ್ತು ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ ಬಳಿಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ಆರಂಭವಾಗಿತ್ತು. ಈ ವರ್ಷದ ಆರಂಭದಲ್ಲಿ ಸುಂಕವನ್ನು ಶೇ.18ಕ್ಕೆ ಇಳಿಸುವ ಕುರಿತು ಎರಡೂ ದೇಶಗಳ ನಡುವೆ ಒಮ್ಮತ ಮೂಡಿದ ಬಳಿಕ ಮಾತುಕತೆ ವೇಗ ಪಡೆದುಕೊಂಡಿತ್ತು. ಆದರೆ, ಟ್ರಂಪ್ ವಿಧಿಸಿದ್ದ ಸುಂಕಗಳನ್ನು ಅಮೆರಿಕದ ನ್ಯಾಯಾಂಗ ವ್ಯವಸ್ಥೆ ರದ್ದುಗೊಳಿಸಿದ ಬೆಳವಣಿಗೆಯಿಂದಾಗಿ ಒಪ್ಪಂದದ ಪ್ರಕ್ರಿಯೆಯಲ್ಲಿ ಹೊಸ ಸಂಕೀರ್ಣತೆ ಎದುರಾಗಿತ್ತು.







