ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದರೆ ಭಾರತ ಭಾರೀ ಸುಂಕ ಪಾವತಿಸಬೇಕಾಗುತ್ತದೆ : ಮತ್ತೆ ಎಚ್ಚರಿಕೆ ನೀಡಿದ ಟ್ರಂಪ್

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್,ಅ.20: ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತನಗೆ ತಿಳಿಸಿದ್ದರು ಎಂಬ ತನ್ನ ಹೇಳಿಕೆಯನ್ನು ಪುನರುಚ್ಚರಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾಗೆ ಮಾಡಲು ವಿಫಲಗೊಂಡರೆ ಭಾರತವು ಭಾರೀ ಸುಂಕಗಳನ್ನು ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರವಿವಾರ ‘ಏರ್ಫೋರ್ಸ್ ಒನ್’ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸದಿದ್ದರೆ ಅದು ಭಾರೀ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಅವರು(ಭಾರತ) ಹಾಗೆ ಮಾಡಲು ಬಯಸುವುದಿಲ್ಲ ಎಂದು ಟ್ರಂಪ್ ಹೇಳಿದರು.
‘ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎಂದು ಅವರು ನನಗೆ ತಿಳಿಸಿದ್ದಾರೆ’ ಎಂದರು.
ಟ್ರಂಪ್ ಕಳೆದ ವಾರವೂ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಆದರೆ ಅದನ್ನು ಅಲ್ಲಗಳೆದಿದ್ದ ವಿದೇಶಾಂಗ ಸಚಿವಾಲಯ, ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಇರುವಾಗ ಭಾರತೀಯ ಬಳಕೆದಾರರ ಹಿತಾಸಕ್ತಿಗಳನ್ನು ಕಾಪಾಡುವುದು ಸರಕಾರದ ನಿರಂತರ ಆದ್ಯತೆಯಾಗಿದೆ ಎಂದು ಹೇಳಿದ್ದರು.
ಮೋದಿ ಮತ್ತು ಟ್ರಂಪ್ ನಡುವೆ ಅಂತಹ ಯಾವುದೇ ಸಂಭಾಷಣೆಯ ಬಗ್ಗೆ ತನಗೆ ತಿಳಿದಿಲ್ಲ ಎಂಬ ಭಾರತದ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಅವರು ಹಾಗೆ ಹೇಳಲು ಬಯಸಿದರೆ ಅವರು ಭಾರೀ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸುತ್ತಾರೆ ಮತ್ತು ಅವರು ಹಾಗೆ ಮಾಡಲು ಬಯಸುವುದಿಲ್ಲ ಎಂದು ಉತ್ತರಿಸಿದರು.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯ ಮೂಲಕ ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸಲು ಪುಟಿನ್ಗೆ ನೆರವಾಗುತ್ತಿದೆ ಎಂದು ಅಮೆರಿಕವು ಪ್ರತಿಪಾದಿಸುತ್ತಿದೆ.
ಟ್ರಂಪ್ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಹೆಚ್ಚುವರಿ ಶೇ.25 ಸುಂಕ ಸೇರಿದಂತೆ ಭಾರತದಿಂದ ಆಮದುಗಳ ಮೇಲೆ ಸುಂಕವನ್ನು ಶೇ.50ಕ್ಕೆ ದ್ವಿಗುಣಗೊಳಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳು ತೀವ್ರ ಒತ್ತಡಕ್ಕೊಳಗಾಗಿವೆ.
ಭಾರತವು ಅಮರಿಕದ ಕ್ರಮವನ್ನು ‘ಅನ್ಯಾಯ, ಅಸಮರ್ಥನೀಯ ಮತ್ತು ಅಸಮಂಜಸ’ ಎಂದು ಬಣ್ಣಿಸಿದೆ.
ಭಾರತ-ಪಾಕ್ ಕದನ ವಿರಾಮವನ್ನು ಮತ್ತೆ ಉಲ್ಲೇಖಿಸಿದ ಟ್ರಂಪ್
ಈ ನಡುವೆ ಸುದ್ದಿಸಂಸ್ಥೆ ಫಾಕ್ಸ್ ಜೊತೆಗೆ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದಾಗಿ ಮತ್ತೆ ಹೇಳಿಕೊಂಡಿದ್ದಾರೆ. ಯುದ್ಧದ ಸಮಯದಲ್ಲಿ ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪುನರುಚ್ಚರಿಸಿದ ಅವರು, ಅವು ಯಾವ ದೇಶಕ್ಕೆ ಸೇರಿದ್ದು ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲಿಲ್ಲ. ಭಾರತ ಮತ್ತು ಪಾಕಿಸ್ತಾನದ ಮೇಲೆ ಶೇ.200ರಷ್ಟು ಸುಂಕವನ್ನು ಹೇರುವುದಾಗಿ ತಾನು ಬೆದರಿಕೆಯೊಡ್ಡಿದ್ದೆ. ಅದು ಯುದ್ಧ ನಿಲ್ಲಿಸಲು ಉಭಯ ದೇಶಗಳ ಮೇಲೆ ಒತ್ತಡ ಹೇರಿತ್ತು ಎಂದು ಹೇಳಿಕೊಂಡರು.
ಅದು ಪರಮಾಣು ಯುದ್ಧವಾಗಬಹುದಿತ್ತು. ಯುದ್ಧ ನಿಲ್ಲಿಸಿ ಲಕ್ಷಾಂತರ ಜೀವಗಳನ್ನು ಉಳಿಸಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತನ್ನನ್ನು ಪ್ರಶಂಸಿದ್ದಾರೆ ಎಂದರು.







