ತಾಲಿಬಾನ್ ಸಚಿವರ ಭೇಟಿ ಬಳಿಕ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪುನಃಸ್ಥಾಪನೆ

PC: x.com/the_hindu
ಹೊಸದಿಲ್ಲಿ: ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಇತ್ತೀಚೆಗೆ ಭಾರತ ಭೇಟಿಯ ವೇಳೆ ಪ್ರಕಟಿಸಿದ್ದಂತೆ ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಮೇಲ್ದರ್ಜೆಗೇರಿಸಿ ಪುನಃಸ್ಥಾಪಿಸಲಾಗಿದೆ. ಇದೀಗ ಕಾಬೂಲ್ ಕಚೇರಿ ಪರಿಪೂರ್ಣ ರಾಯಭಾರಿ ಕಚೇರಿಯಾಗಿ ಮಾರ್ಪಟ್ಟಿದೆ. ಉಭಯ ದೇಶಗಳ ನಡುವಿನ ಒಡಂಬಡಿಕೆ ಅನ್ವಯ, ಭಾರತ ರಾಯಭಾರಿಯನ್ನು ನೇಮಕ ಮಾಡುವ ಮುನ್ನ ಕಾಬೂಲ್ ಮಿಷನ್ ನ ಹಂಗಾಮಿ ಮುಖ್ಯಸ್ಥರನ್ನು ಭಾರತ ನಿಯೋಜಿಸಲಿದ್ದು, ತಾಲಿಬಾನ್ ನವೆಂಬರ್ ತಿಂಗಳ ಒಳಗಾಗಿ ಭಾರತಕ್ಕೆ ಇಬ್ಬರು ರಾಜತಾಂತ್ರಿಕರನ್ನು ಕಳುಹಿಸಲಿದೆ.
ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನಕ್ಕೆ ಭಾರತ ಅಧಿಕೃತವಾಗಿ ಮಾನ್ಯತೆ ನೀಡದೇ ಇದ್ದರೂ, ದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯಲ್ಲಿ ಇಬ್ಬರು ರಾಜತಾಂತ್ರಿಕರು ಕಾರ್ಯ ನಿರ್ವಹಿಸಲಿದ್ದಾರೆ. ಇದು ಉಭಯ ದೇಶಗಳ ನಡುವಿನ ಆರ್ಥಿಕ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಅಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಭಾರತ ಹೆಚ್ಚಿನ ಪಾತ್ರ ವಹಿಸಲಿದ್ದು, ಮಾನ್ಯತೆ ನೀಡುವ ವಿಚಾರದಲ್ಲಿ ಜಾಗತಿಕ ಸಮುದಾಯದ ನಿರ್ಧಾರಕ್ಕೆ ಅನುಸಾರವಾಗಿ ತನ್ನ ನಿಲುವನ್ನು ಹೊಂದಿರುತ್ತದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷ ಉಲ್ಬಣಗೊಂಡಿರುವ ಬೆನ್ನಲ್ಲೇ ತಾಲಿಬಾನ್ ಸಚಿವರ ಭಾರತ ಪ್ರವಾಸ ವಿಶೇಷ ಮಹತ್ವ ಪಡೆದಿದೆ.
"ಅಫ್ಘಾನ್ ಸಚಿವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕಟಿಸಿದ ನಿರ್ಧಾರದಂತೆ, ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ರಾಯಭಾರ ಕಚೇರಿಯಾಗಿ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸಲು ಕಾಬೂಲ್ ನಲ್ಲಿ ಭಾರತದ ತಾಂತ್ರಿಕ ಮಿಷನ್ ನ ಸ್ಥಾನವನ್ನು ಪುನಸ್ಥಾಪನೆ ಮಾಡಿದೆ" ಎಂದು ಭಾರತ ಅಧಿಕೃತ ಹೇಳಿಕೆ ನೀಡಿದೆ. ಉಭಯ ದೇಶಗಳ ನಡುವಿನ ಪರಸ್ಪರ ಹಿತಾಸಕ್ತಿಯ ಎಲ್ಲ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಲು ಈ ನಡೆ ನೆರವಾಗಲಿದೆ.







