ಭಾರತ-ಪಾಕಿಸ್ತಾನದ ಗಡಿಯಲ್ಲಿ ಮುಂದುವರಿದ ಉದ್ವಿಗ್ನ ಪರಿಸ್ಥಿತಿ: ಪಂಜಾಬ್,ರಾಜಸ್ಥಾನದ ಭಾರತೀಯ ರೈತರಿಂದ ಗೋಧಿ ಕಟಾವು

ಗೋಧಿ ಕಟಾವು ಮಾಡುತ್ತಿರುವ ಮಹಿಳೆ | PTI File Photo
ಹೊಸದಿಲ್ಲಿ:ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಗುವಿನ ಸ್ಥಿತಿ ಮುಂದುವರಿದಿರುವಾಗಲೇ, ಗೋಧಿ ಬೆಳೆಯುವ ಪ್ರಮುಖ ರಾಜ್ಯಗಳಾದ ಪಂಜಾಬ್ ಮತ್ತು ರಾಜಸ್ಥಾನದಲ್ಲಿನ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗೋಧಿ ಕಟಾವು ಮುಕ್ತಾಯಗೊಂಡಿದೆ ಎಂದು ಗುರುವಾರ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಗಡಿ ಬಳಿಯ ಗುಜರಾತ್, ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಾದ್ಯಂತ ಸುಮಾರು 3,310 ಕಿಮೀ ವ್ಯಾಪಿಸಿಕೊಂಡಿರುವ ಗೋಧಿ ಹೊಲಗಳಲ್ಲಿನ ಗೋಧಿ ಕಟಾವಿನ ವಸ್ತು ಸ್ಥಿತಿಯ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ, "ಈ ಹೊತ್ತಿಗಾಗಲೇ ಗೋಧಿ ಕಟಾವು ಮುಕ್ತಾಯಗೊಂಡಿದೆ", ಎಂದು ತಿಳಿಸಿದರು.
ಗಡಿ ಪ್ರದೇಶಗಳಲ್ಲಿ ಕಟಾವು ಮಾಡಲಾಗಿರುವ ಒಟ್ಟು ಗೋಧಿ ಪ್ರಮಾಣದ ಬಗ್ಗೆ ಯಾವುದೇ ಪ್ರತ್ಯೇಕ ದತ್ತಾಂಶ ಲಭ್ಯವಿರದಿದ್ದರೂ, "ಗಡಿ ಬಳಿ ಕಟಾವು ಮಾಡಲಾಗಿರುವ ಗೋಧಿಯ ಪೈಕಿ ಉಳಿದೆಲ್ಲ ರಾಜ್ಯಗಳಿಗಿಂತ ಪಂಜಾಬ್ ರಾಜ್ಯದಲ್ಲೇ ಗಮನಾರ್ಹ ಪ್ರಮಾಣದ ಕಟಾವು ಪ್ರದೇಶವಿದೆ", ಎಂದು ಕೇಂದ್ರ ಕೃಷಿ ಆಯುಕ್ತ ಪ್ರವೀಣ್ ಕುಮಾರ್ ಸಿಂಗ್ ಹೇಳಿದರು.
"ರೈತರು ಬೆಳೆಯನ್ನು ಕಟಾವು ಮಾಡಿದ್ದಾರೆ. ಈ ಬಾರಿಯ ಇಳುವರಿ ಕಳೆದ ಬಾರಿಗಿಂತ ಉತ್ತಮವಾಗಿದೆ", ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದರು.
ರಾಜಸ್ಥಾನದಲ್ಲಿ ಗಡಿ ಬಳಿಯಿರುವ ಗಂಗಾನಗರ್ ಜಿಲ್ಲೆ ಸೇರಿದಂತೆ ಹನುಮಾನ್ಗಢ ಹಾಗೂ ಜೈಸಲ್ಮೇರ್ ಜಿಲ್ಲೆಗಳಲ್ಲಿ ಮೊದಲಿಗೆ ಗೋಧಿ ಕಟಾವು ನಡೆಯುತ್ತದೆ. ಈ ಕುರಿತು ಪ್ರತಿಕ್ರಿಯಿಸಿದ ರಾಜಸ್ಥಾನ ಸರಕಾರದ ಅಧಿಕಾರಿಯೊಬ್ಬರು, "ರೈತರು ತಮ್ಮ ಗೋಧಿ ಬೆಳೆಯನ್ನು ಸಂಪೂರ್ಣವಾಗಿ ಕಟಾವು ಮಾಡಿದ್ದಾರೆ" ಎಂದು ದೃಢಪಡಿಸಿದ್ದಾರೆ.
ಎಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ಗಡಿ ರಾಜ್ಯಗಳ ಗೋಧಿ ಬೆಳೆಯುವ ರೈತರಿಗೆ ಕಟಾವನ್ನು ತ್ವರಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಾಧಿಕಾರಗಳು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ಈ ಮುಂಚಿತ ಕಟಾವು ನಿರ್ದೇಶನವನ್ನು ಹೊರಡಿಸಲಾಗಿದೆ.







