ನ್ಯೂಸ್ಪ್ರಿಂಟ್ ಕೊರತೆ| ಇಂಡಿಯನ್ ನ್ಯೂಸ್ಪೇಪರ್ ಸೊಸೈಟಿ ಕಳವಳ

Photo : Meta AI
ಹೊಸದಿಲ್ಲಿ, ಜ. 3: ದೇಶವನ್ನು ಬಾಧಿಸುತ್ತಿರುವ ನ್ಯೂಸ್ಪ್ರಿಂಟ್ ಕೊರತೆಯ ಬಗ್ಗೆ ಇಂಡಿಯನ್ ನ್ಯೂಸ್ಪೇಪರ್ ಸೊಸೈಟಿ (ಐಎನ್ಎಸ್) ಗಂಭೀರ ಕಳವಳ ವ್ಯಕ್ತಪಡಿಸಿದೆ. ಪತ್ರಿಕೆಗಳ ಮುದ್ರಣದಲ್ಲಿ ಬಳಸುವ ಕಾಗದದ ಕೊರತೆಯ ಹಿನ್ನೆಲೆಯಲ್ಲಿ ಪ್ರಕಾಶಕರು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ ಎಂದು ಅದು ಹೇಳಿದೆ.
ಭಾರತದ ವಾರ್ಷಿಕ ನ್ಯೂಸ್ಪ್ರಿಂಟ್ ಬಳಕೆ ಸುಮಾರು 12 ಲಕ್ಷ ಟನ್ ಆಗಿದ್ದು, ದೇಶಿ ಕಾರ್ಖಾನೆಗಳು ಈ ಬೇಡಿಕೆಯ ಸುಮಾರು 40 ಶೇಕಡವನ್ನು ಮಾತ್ರ ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ.
ಈ ಬೇಡಿಕೆ-ಪೂರೈಕೆ ಕೊರತೆಯು 20 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಉಳಿದುಕೊಂಡು ಬಂದಿದೆ ಹಾಗೂ ಈ ಅವಧಿಯಲ್ಲಿ ದೇಶಿ ನ್ಯೂಸ್ಪ್ರಿಂಟ್ ಉತ್ಪಾದನೆ ಸಾಮರ್ಥ್ಯವನ್ನು ವಿಸ್ತರಿಸಲು ಯಾವುದೇ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಐಎನ್ಎಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದರಿಂದಾಗಿ, ನ್ಯೂಸ್ಪ್ರಿಂಟ್ನ ನಿರಂತರ ಪೂರೈಕೆಗಾಗಿ ಆಮದಿಗೆ ಮೊರೆಹೋಗುವುದನ್ನು ಬಿಟ್ಟು ಮಾರ್ಗ ಭಾರತೀಯ ಪತ್ರಿಕಾ ಪ್ರಕಾಶಕರಿಗಿಲ್ಲ. ಮಾಹಿತಿಯ ಅಬಾಧಿತ ಹರಿವಿಗೆ ಇದು ಅಗತ್ಯವಾಗಿದೆ ಎಂದು ಐಎನ್ಎಸ್ ಹೇಳಿದೆ.







