ರೈಲು ಪ್ರಯಾಣದರಗಳಲ್ಲಿ ಏರಿಕೆ: ಜು.1ರಿಂದ ಜಾರಿ ಸಾಧ್ಯತೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತೀಯ ರೈಲ್ವೆಯು ಜು.1ರಿಂದ ಜಾರಿಗೆ ಬರುವಂತೆ ಎಸಿ ಮತ್ತು ನಾನ್-ಎಸಿ ಮೇಲ್,ಎಕ್ಸ್ಪ್ರೆಸ್ ಮತ್ತು ದ್ವಿತೀಯ ದರ್ಜೆ ಟಿಕೆಟ್ ಗಳ ಬೆಲೆಗಳಲ್ಲಿ ಅಲ್ಪ ಏರಿಕೆಯನ್ನು ಮಾಡುವ ಸಾಧ್ಯತೆಯಿದೆ.
ದರ ಪರಿಷ್ಕರಣೆಯು ಪ್ರಯಾಣಿಕರಿಗೆ ಹೆಚ್ಚಿನ ಹೊರೆಯನ್ನುಂಟು ಮಾಡುವುದಿಲ್ಲ ಎಂದು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದ ಹಿರಿಯ ರೈಲ್ವೆ ಅಧಿಕಾರಿಯೋರ್ವರು,ಉಪನಗರ ರೈಲು ಪ್ರಯಾಣ ದರ ಮತ್ತು ಮಾಸಿಕ ಪಾಸ್ ದರಗಳಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆಯಿಲ್ಲ ಎಂದು ಹೇಳಿದರು.
500 ಕಿ.ಮೀ.ವರೆಗಿನ ಪ್ರಯಾಣಕ್ಕೆ ಸಾಮಾನ್ಯ ದ್ವಿತೀಯ ದರ್ಜೆ ಟಿಕೆಟ್ ದರಗಳಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ,ಆದರೆ ಸಾಮಾನ್ಯ ದ್ವೀತಿಯ ದರ್ಜೆ ಪ್ರಯಾಣ ದರವನ್ನು 500 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿ.ಮೀ.ಗೆ ಕೇವಲ ಅರ್ಧ ಪೈಸೆಯಷ್ಟು ಹೆಚ್ಚಿಸಲು ರೈಲ್ವೆಯು ಉದ್ದೇಶಿಸಿದೆ ಎಂದು ಅವರು ತಿಳಿಸಿದರು.
ದೇಶಾದ್ಯಂತ ಪ್ರತಿ ದಿನ 13,000ಕ್ಕೂ ಅಧಿಕ ಟ್ರಿಪ್ಗಳನ್ನು ನಡೆಸುತ್ತಿರುವ ನಾನ್-ಎಸಿ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಟಿಕೆಟ್ ದರಗಳಲ್ಲಿ ಪ್ರತಿ ಕಿ.ಮೀ.ಗೆ ಕನಿಷ್ಠ ಒಂದು ಪೈಸೆ ಹೆಚ್ಚಳವಾಗುವ ಸಾಧ್ಯತೆಯಿದೆ ಮತ್ತು ಎಸಿ ದರ್ಜೆಯ ಟಿಕೆಟ್ ದರಗಳನ್ನು ಪ್ರತಿ ಕಿ.ಮೀ.ಗೆ ಎರಡು ಪೈಸೆ ಹೆಚ್ಚಿಸುವ ಪ್ರಸ್ತಾವವಿದೆ ಎಂದು ಅವರು ವಿವರಿಸಿದರು.
ದರ ಪರಿಷ್ಕರಣೆಯು ಪ್ರಯಾಣಿಕರಿಗೆ,ವಿಶೇಷವಾಗಿ ನಿಯಮಿತವಾಗಿ ಮತ್ತು ಕಡಿಮೆ ದೂರ ಪ್ರಯಾಣಿಸುವವರಿಗೆ ಹೊರೆಯಾಗದಂತೆ ಕಾರ್ಯಾಚರಣೆ ವೆಚ್ಚಗಳನ್ನು ನಿರ್ವಹಿಸಲು ರೈಲ್ವೆಯ ನಿರಂತರ ಪ್ರಯತ್ನಗಳ ಭಾಗವಾಗಿದೆ ಎಂದರು.