ಆಹಾರ ಸರಬರಾಜುದಾರನ ವಿರುದ್ಧ ದೂರಿದ ರೈಲ್ವೆ ಪ್ರಯಾಣಿಕನ ಮೇಲೆ ಹಲ್ಲೆ: ವೀಡಿಯೋ ವೈರಲ್
ದೂರುದಾರರ ಗೌಪ್ಯತೆ ಕಾಪಾಡದ IRCTC

Photos: r/indianrailways
ಹೊಸದಿಲ್ಲಿ: ತನಗೆ ಅಧಿಕ ಶುಲ್ಕ ವಿಧಿಸಿದ ಆಹಾರ ಸರಬರಾಜುದಾರನ ವಿರುದ್ಧ ದೂರು ನೀಡಿದ ರೈಲ್ವೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೊದಲಿಗೆ ರೆಡಿಟ್ ನಲ್ಲಿ ಹಂಚಿಕೆಯಾಗಿರುವ ಈ ವೀಡಿಯೋ, ನಂತರ, ಎಕ್ಸ್ ಹಾಗೂ ಇನ್ಸ್ಟಾಗ್ರಾಮ್ ನಲ್ಲೂ ವೈರಲ್ ಆಗಿದೆ.
“ಆಹಾರ ಸರಬರಾಜುದಾರನು ಅಧಿಕ ಶುಲ್ಕ ವಿಧಿಸುತ್ತಿರುವ ಕುರಿತು ರೈಲ್ ಸೇವಾದಲ್ಲಿ ಪ್ರಯಾಣಿಕರೊಬ್ಬರು ದೂರು ನೀಡಿದರು. ಪ್ರಯಾಣಿಕರ ಪಿಎನ್ಆರ್ ಸಂಖ್ಯೆ ಹಾಗೂ ಆಸನ ಸಂಖ್ಯೆಯ ಮಾಹಿತಿಯನ್ನು ಪಡೆದಿರುವ ರೈಲ್ ಸೇವಾ, ಅದನ್ನು IRCTC ಗೆ ಕಳುಹಿಸಿಕೊಟ್ಟಿದೆ. ಈ ಕುರಿತು IRCTC ಆಹಾರ ಸರಬರಾಜು ಗುತ್ತಿಗೆದಾರನಿಗೆ ಮಾಹಿತಿ ನೀಡಿದ್ದು, ಆತ ದೂರು ನೀಡಿದ ಪ್ರಯಾಣಿಕನನ್ನು ಥಳಿಸಲು ಜನರನ್ನು ಕಳಿಸಿಕೊಟ್ಟಿದ್ದಾನೆ” ಎಂಬ ಶೀರ್ಷಿಕೆ ಹೊಂದಿರುವ ಪೋಸ್ಟ್ ಅನ್ನು ರೆಡಿಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನೊಂದಿಗೆ ಹಲ್ಲೆ ಘಟನೆಯ ವೀಡಿಯೋವನ್ನೂ ಹಂಚಿಕೊಳ್ಳಲಾಗಿದೆ.
ರೆಡಿಟ್ ಪೋಸ್ಟ್ ಪ್ರಕಾರ, ದೂರುದಾರನು ಅಧಿಕ ಶುಲ್ಕ ವಿಧಿಸಲಾಗುತ್ತಿದೆ ಎಂದು ರೈಲ್ ಸೇವಾದಲ್ಲಿ ದೂರು ದಾಖಲಿಸಿದ ನಂತರ ಈ ಘರ್ಷಣೆ ನಡೆದಿದೆ. ದೂರುದಾರನ ಪಿಎನ್ಆರ್ ಸಂಖ್ಯೆ ಹಾಗೂ ಆಸನ ಸಂಖ್ಯೆಯನ್ನು IRCTC ಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು IRCTC ಗುತ್ತಿಗೆದಾರನಿಗೆ ಮಾಹಿತಿ ನೀಡಿದ್ದು, ಆತನ ಪ್ರಯಾಣಿಕನನ್ನು ಥಳಿಸಲು ಜನರನ್ನು ಕಳಿಸಿದ್ದಾನೆ ಎಂದು ದೂರಲಾಗಿದೆ.
19 ಸೆಕೆಂಡ್ ಗಳ ಈ ವೀಡಿಯೋ ದೃಶ್ಯಾಕವಳಿಯಲ್ಲಿ ಸ್ಲೀಪರ್ ಕೋಚ್ ಒಂದರಲ್ಲಿ ಅಹಾರ ಸರಬರಾಜು ಸಮವಸ್ತ್ರ ಧರಿಸಿರುವ ಕೆಲವು ವ್ಯಕ್ತಿಗಳು ಸೇರಿದಂತೆ ಹಲವು ವ್ಯಕ್ತಿಗಳು ಪ್ರಯಾಣಿಕರೊಬ್ಬರನ್ನು ಸುತ್ತುವರಿದು, ಆತನ ಮೇಲೆ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ. ಈ ವೇಳೆ ಬೇರಾವ ಪ್ರಯಾಣಿಕರೂ ಮಧ್ಯಪ್ರವೇಶಿಸದೆ, ಈ ಘಟನೆಯನ್ನು ಮೂಕಪ್ರೇಕ್ಷಕರಂತೆ ವೀಕ್ಷಿಸುತ್ತಿರುವುದೂ ಈ ವೀಡಿಯೋದಲ್ಲಿ ಸೆರೆಯಾಗಿದೆ.







