ಪ್ರಧಾನಿ ಮೋದಿಗೆ ಪ್ರಶ್ನೆ ಕೇಳಿದ್ದ ನಾರ್ವೆ ಪತ್ರಕರ್ತೆಯ ಭಾರತದ ವೀಸಾ ಕೊನೆಯ ಕ್ಷಣದಲ್ಲಿ ರದ್ದು!
ಹೈದರಾಬಾದ್ ನಲ್ಲಿ ಆಯೋಜಿಸಿದ್ದ ಶೃಂಗಸಭೆಯಲ್ಲಿ ಭಾಗವಹಿಸಲು ಬರುತ್ತಿದ್ದ ಹೆಲ್ಲೆ ಲಿಂಗ್ ರ ಪ್ರಯಾಣಕ್ಕೆ ತಡೆ

ಪತ್ರಕರ್ತೆ ಹೆಲ್ಲೆ ಲಿಂಗ್ | Photo Credit : thewire.in
ಹೊಸದಿಲ್ಲಿ: ನಾರ್ವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರಿಕಾ ಸ್ವಾತಂತ್ರ್ಯದ ಕುರಿತು ಪ್ರಶ್ನಿಸಿದ್ದ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತೀಯ ವೀಸಾವನ್ನು ಭಾರತಕ್ಕೆ ಪ್ರಯಾಣಿಸಲು ಕೆಲವೇ ಗಂಟೆಗಳು ಬಾಕಿ ಇರುವಾಗ ರದ್ದುಗೊಳಿಸಲಾಗಿದೆ. ವೀಸಾ ರದ್ದತಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲವಾದರೂ, ಮೋದಿ ಅವರನ್ನು ಪ್ರಶ್ನಿಸಿದ್ದಕ್ಕೂ ಈ ಬೆಳವಣಿಗೆಗೂ ಸಂಬಂಧವಿರಬಹುದು ಎಂದು ಲಿಂಗ್ ಶಂಕಿಸಿದ್ದಾರೆ.
ತೆಲಂಗಾಣ ಸರಕಾರ ನವೆಂಬರ್ 12ರಿಂದ 14ರವರೆಗೆ ಹೈದರಾಬಾದ್ ನಲ್ಲಿ ಆಯೋಜಿಸಿರುವ 'ಭಾರತ ಶೃಂಗಸಭೆ'ಯಲ್ಲಿ (Bharat Summit) ಭಾಗವಹಿಸಲು ಲಿಂಗ್ ಭಾರತಕ್ಕೆ ಬರಬೇಕಿತ್ತು. ಶೃಂಗಸಭೆಯಲ್ಲಿ 'ಮಾಧ್ಯಮಗಳ ಭವಿಷ್ಯ' (The Future of Media) ಕುರಿತ ಚರ್ಚೆಯಲ್ಲಿ ಮಾತನಾಡಲು ಅವರಿಗೆ ಆಹ್ವಾನ ನೀಡಲಾಗಿತ್ತು.
ಭಾರತಕ್ಕೆ ಪ್ರಯಾಣಿಸಲು ಲಿಂಗ್ ಮಾನ್ಯವಾದ ಒನ್ ಟೈಮ್ ಎಂಟ್ರಿ ವೀಸಾ ಹೊಂದಿದ್ದರು. ಬುಧವಾರ ಓಸ್ಲೋದಿಂದ ಹೈದರಾಬಾದ್ ಗೆ ವಿಮಾನದಲ್ಲಿ ಹೊರಡಲು ಸಿದ್ಧರಾಗಿದ್ದಾಗ ನಾರ್ವೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಅವರಿಗೆ ಕರೆ ಬಂದಿದೆ. ವೀಸಾ ರದ್ದುಗೊಳಿಸಿರುವುದರಿಂದ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೀಸಾ ರದ್ದತಿಯ ಅಧಿಕೃತ ಪ್ರಕ್ರಿಯೆ ಪೂರ್ಣಗೊಳಿಸಲು ಖುದ್ದಾಗಿ ರಾಯಭಾರ ಕಚೇರಿಗೆ ಭೇಟಿ ನೀಡುವಂತೆಯೂ ಸೂಚಿಸಿದ್ದಾರೆ.
"ಇದು ಆಘಾತಕಾರಿಯಾಗಿದೆ. ಇದೊಂದು ಹುಚ್ಚುತನದ ನಿರ್ಧಾರ! ಭಾರತಕ್ಕೆ ಬರಲು ನನಗೆ ಅನುಮತಿ ದೊರೆತಿತ್ತು. ಆ ಅನುಮತಿಯ ಆಧಾರದ ಮೇಲೆಯೇ ವೀಸಾವನ್ನೂ ನೀಡಲಾಗಿತ್ತು. ಆದರೆ, ಗೃಹ ಸಚಿವಾಲಯವು ನಾನು ಭಾರತಕ್ಕೆ ಪ್ರವೇಶಿಸಬಾರದು ಎಂದು ನಿರ್ಧರಿಸಿದಂತಿದೆ. ನನ್ನ ವಿಷಯದಲ್ಲಿ ಗೃಹ ಸಚಿವಾಲಯದ ಪಾತ್ರವೇನು ಎಂಬುದು ಅರ್ಥವಾಗುತ್ತಿಲ್ಲ. ಈ ವಾರಾಂತ್ಯದಲ್ಲಿ ನಡೆಯಲಿದ್ದ ಸಮ್ಮೇಳನದಲ್ಲಿ ಭಾಗವಹಿಸಲು ನಾನು ಭಾರತಕ್ಕೆ ಬರಬೇಕಿತ್ತು" ಎಂದು ಲಿಂಗ್ ಗುರುವಾರ 'the wire' ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ಅನುಮತಿ ಇದ್ದರೂ ವೀಸಾ ರದ್ದು
ಲಿಂಗ್ ಅವರಿಗೆ ರಾಜಕೀಯ ಅನುಮತಿ ನೀಡಿದ್ದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ. ನ. 3ರಂದು ಭಾರತ ಶೃಂಗಸಭೆಯಲ್ಲಿ ಭಾಗವಹಿಸಲಿದ್ದ ವಿದೇಶಿ ಪ್ರತಿನಿಧಿಗಳ ಪಟ್ಟಿಗೆ ಸಚಿವಾಲಯ ಅನುಮೋದನೆ ನೀಡಿತ್ತು. ಆದರೆ, ಈ ಅನುಮೋದನೆಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಇತರ ಸಂಬಂಧಿತ ಪ್ರಾಧಿಕಾರಗಳ ಒಪ್ಪಿಗೆಯೂ ಅಗತ್ಯ ಎಂಬ ಷರತ್ತನ್ನು ವಿಧಿಸಲಾಗಿತ್ತು.
ವೀಸಾ ರದ್ದತಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು 'the wire' ಸುದ್ದಿಸಂಸ್ಥೆಯು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ಸಚಿವಾಲಯದಿಂದ ವಿವರಣೆ ಕೇಳಿದೆ. ಸಚಿವಾಲಯಗಳ ಪ್ರತಿಕ್ರಿಯೆ ಬಂದ ಬಳಿಕ ವರದಿಯನ್ನು ನವೀಕರಿಸುವುದಾಗಿ ತಿಳಿಸಿದೆ.
'ಪ್ರಜಾಪ್ರಭುತ್ವದ ತಾಯಿ' ಯಂತಿರುವ ದೇಶದಲ್ಲಿ ಹೀಗಾಗುತ್ತದೆಯೇ?
ಲಿಂಗ್ ಅವರಿಗೆ ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದಕ್ಕೆ ಸಂಘಟಕರಲ್ಲೊಬ್ಬರಾದ ಪುಷ್ಪರಾಜ್ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಹೆಲ್ಲೆ ಲಿಂಗ್ ಅವರು ನಮ್ಮೊಂದಿಗೆ ಭಾರತ ಶೃಂಗಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದು ಅತ್ಯಂತ ದುರದೃಷ್ಟಕರ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಡಳಿತದಲ್ಲಿ 'ಪ್ರಜಾಪ್ರಭುತ್ವದ ತಾಯಿ' ಹೀಗಿರುತ್ತಾಳೆ!" ಎಂದು ಅವರು 'ಎಕ್ಸ್' ಜಾಲತಾಣದಲ್ಲಿನ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಓಸ್ಲೋದಲ್ಲಿ ಮೋದಿಗೆ ಮುಜುಗರ ಉಂಟುಮಾಡಿದ್ದ ಪ್ರಶ್ನೆ
ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆಯ ಓಸ್ಲೋಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೆಲ್ಲೆ ಲಿಂಗ್ ಕೇಳಿದ್ದ ಪ್ರಶ್ನೆ ಭಾರತದಲ್ಲಿ ವ್ಯಾಪಕ ಸುದ್ದಿಯಾಗಿತ್ತು.
ಮೋದಿ ಮತ್ತು ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ ಬಳಿಕ ಲಿಂಗ್, "ಪ್ರಧಾನಿ ಮೋದಿ, ಜಗತ್ತಿನಲ್ಲೇ ಅತ್ಯಂತ ಮುಕ್ತವಾದ ಪತ್ರಿಕಾ ರಂಗದ ಪ್ರಶ್ನೆಗಳಿಗೆ ನೀವು ಏಕೆ ಉತ್ತರಿಸುವುದಿಲ್ಲ?" ಎಂದು ಪ್ರಶ್ನಿಸಿದ್ದರು. ಇದಕ್ಕೂ ಮೊದಲು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಿದ್ದೀರಾ ಎಂದು ಕೇಳಿದಾಗಲೂ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದ್ದರು.
ಇಷ್ಟಕ್ಕೇ ನಿಲ್ಲದ ಲಿಂಗ್, ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಅವರನ್ನೂ ಪ್ರಶ್ನಿಸಿದ್ದರು. ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳು ಮತ್ತು ಪತ್ರಕರ್ತರ ಪ್ರಶ್ನೆಗಳಿಗೆ ಮೋದಿ ಉತ್ತರಿಸದಿರುವ ನಿರ್ಧಾರದ ಕುರಿತು ಅವರು ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಬಿ ಜಾರ್ಜ್, ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಮೋದಿ ಸರಕಾರ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದ್ದರು.
ಅಮಿತ್ ಶಾ ಅವರಿಗೆ ನೇರ ಪ್ರಶ್ನೆ
ತಮ್ಮ ವೀಸಾವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿ ಲಿಂಗ್ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿ ವೀಡಿಯೊ ಸಂದೇಶ ಬಿಡುಗಡೆ ಮಾಡಿದ್ದಾರೆ.
"ಮೇ ತಿಂಗಳಲ್ಲಿ ನಾರ್ವೆಯ ಓಸ್ಲೋದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ಮೂಲಕ ನನ್ನ ಪತ್ರಿಕಾ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದೆ. ಬಹುಶಃ ಅದಕ್ಕೂ ಈಗ ನಡೆದಿರುವ ಬೆಳವಣಿಗೆಗೂ ಏನಾದರೂ ಸಂಬಂಧವಿರಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಮೋದಿ ಸರಕಾರದ ವಿರುದ್ಧ ತಾವು ವ್ಯಕ್ತಪಡಿಸಿದ್ದ ಟೀಕೆಗಳು ಹಾಗೂ ಭಾರತದ ಪ್ರಭಾವಿ ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರನ್ನು ಪ್ರಶ್ನಿಸಿದ್ದೂ ವೀಸಾ ರದ್ದತಿಗೆ ಕಾರಣವಾಗಿರಬಹುದು ಎಂದು ಲಿಂಗ್ ಶಂಕಿಸಿದ್ದಾರೆ.
ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡುವ ತಮ್ಮ ಯೋಜನೆ ಕೈಗೂಡದಿರುವುದಕ್ಕೆ ಅವರು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.
"ಭಾರತದಲ್ಲಿರುವ ನನ್ನ ಪತ್ರಕರ್ತ ಸ್ನೇಹಿತರು ಹೇಳುವ ಪ್ರಕಾರ, ಮೋದಿ ಸೇಡು ತೀರಿಸಿಕೊಳ್ಳುವ ಸ್ವಭಾವದವರು. ಅವರು ಈ ವಿಚಾರಗಳನ್ನು ಸುಲಭವಾಗಿ ಮರೆಯುವುದಿಲ್ಲ. ಬಹುಶಃ ಅದಕ್ಕಾಗಿಯೇ ಹೀಗಾಗಿರಬಹುದು. ಅಧಿಕಾರಿಗಳು ಏನು ಯೋಚಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಘಟನೆಯ ಬಗ್ಗೆ ನಾನು ಬರೆಯುವುದಿಲ್ಲ ಎಂದು ಅವರು ಭಾವಿಸಿದ್ದಾರೇಯೇ?" ಎಂದು ಲಿಂಗ್ 'ದಿ ವೈರ್' ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.






