ಇಸ್ರೇಲ್ ಗೆ ತೆರಳುವ ಭಾರತೀಯ ಕಾರ್ಮಿಕರಿಗೆ ವೈದ್ಯಕೀಯ ಸವಲತ್ತು ಅಥವಾ ಉದ್ಯೋಗ ಭದ್ರತೆ ದೊರೆಯುವುದಿಲ್ಲ: ವರದಿ
ಕಾರ್ಮಿಕರು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ 10 ಸಾವಿರ ರೂ ಸೌಲಭ್ಯ ಶುಲ್ಕವಾಗಿ ಪಾವತಿಸಬೇಕು

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಯುದ್ಧಪೀಡಿತ ವಲಯಗಳಿಗೆ ಉದ್ಯೋಗಕ್ಕಾಗಿ ತೆರಳುವ ಭಾರತೀಯ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಒದಗಿಸುತ್ತಿರುವ ಯಾವುದೇ ಸಾಮಾಜಿಕ ಭದ್ರತೆಗಳಿಗೆ ಇಸ್ರೇಲ್ ಗೆ ಉದ್ಯೋಗಕ್ಕೆ ತೆರಳುವ ಭಾರತೀಯ ಉದ್ಯೋಗಿಗಳು ಅರ್ಹರಾಗಿರುವುದಿಲ್ಲ ಎಂದು The Hindu ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಧಿಕೃತ ಪ್ರಚಾರದ ದಾಖಲೆಗಳನ್ನು ಉಲ್ಲೇಖಿಸಿರುವ The Hindu ಪತ್ರಿಕೆಯು, ಬಹುತೇಕ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳುವ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಒದಗಿಸುತ್ತಿರುವ ವೈದ್ಯಕೀಯ ಸವಲತ್ತು ಅಥವಾ ಉದ್ಯೋಗ ಖಾತ್ರಿ, ರಕ್ಷಣೆಗಳು ದೊರೆಯುವುದಿಲ್ಲ ಎಂದು ವರದಿ ಮಾಡಿದೆ.
ಉತ್ತರ ಪ್ರದೇಶ ಮತ್ತು ಹರ್ಯಾಣ ಸೇರಿದಂತೆ ಕನಿಷ್ಠ ಎರಡು ರಾಜ್ಯಗಳು ಮುಂದಿನ ತಿಂಗಳುಗಳಲ್ಲಿ ಇಸ್ರೇಲ್ ಗೆ ತಲಾ 10,000 ಕಾರ್ಮಿಕರನ್ನು ರವಾನಿಸಲು ಅರ್ಜಿಗಳನ್ನು ಆಹ್ವಾನಿಸಿವೆ. ಈ ಪ್ರಕ್ರಿಯೆಯು ಇಸ್ರೇಲ್ ನ ನಿರ್ಮಾಣ ಹಾಗೂ ಶುಶ್ರೂಷೆ ವಲಯಗಳಲ್ಲಿ 42,000 ಕಾರ್ಮಿಕರಿಗೆ ಉದ್ಯೋಗಾವಕಾಶ ಒದಗಿಸಲು ಕಳೆದ ವರ್ಷದ ಮೇ ತಿಂಗಳಲ್ಲಿ ಹೊಸದಿಲ್ಲಿ ಮತ್ತು ಟೆಲ್ ಅವೀವ್ ನಡುವಿನ ಒಪ್ಪಂದದ ನಂತರ ಪ್ರಾರಂಭಗೊಂಡಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದಿದ್ದ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಉಭಯ ನಾಯಕರು ಭಾರತದಿಂದ ಇಸ್ರೇಲ್ ಗೆ ತೆರಳುವ ಕಾರ್ಮಿಕರನ್ನು ಮುಂಚಿತವಾಗಿ ಕಳಿಸಿಕೊಡುವ ಕುರಿತು ಮಾತುಕತೆ ನಡೆಸಿದ್ದರು.
ಇಸ್ರೇಲ್ ಗೆ ಹೋಗುವ ಕಾರ್ಮಿಕರರಿಗೆ ಮಾಸಿಕ ವೇತನವು ಸರಿಸುಮಾರು 6,100 ಇಸ್ರೇಲಿ ಶೇಕೆಲ್ಗಳು ಅಥವಾ 1.37 ಲಕ್ಷ ರೂ. ಇರಲಿದೆ. ವಸತಿ, ಆಹಾರ ಮತ್ತು ವೈದ್ಯಕೀಯ ವಿಮೆಯ ವೆಚ್ಚವನ್ನು ಸಂಬಳದಿಂದಲೇ ಕಡಿತಗೊಳಿಸಲಾಗುತ್ತದೆ. ಕಾರ್ಮಿಕರು ಇಸ್ರೇಲ್ಗೆ ಪ್ರಯಾಣಿಸಲು ತಮ್ಮದೇ ಆದ ಟಿಕೆಟ್ಗಳನ್ನು ಖರೀದಿಸಬೇಕು. ಜೊತೆಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ "ಸೌಲಭ್ಯ ಶುಲ್ಕ" ಎಂದು 10,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದರ ಬೆನ್ನಿಗೇ, ಪಶ್ಚಿಮ ಏಶ್ಯಾ ರಾಷ್ಟ್ರವಾದ ಇಸ್ರೇಲ್ ನಲ್ಲಿ ದುಡಿಯುತ್ತಿರುವ ಫೆಲೆಸ್ತೀನ್ ಕಾರ್ಮಿಕರ ಬದಲಿಗೆ ಭಾರತೀಯ ಕಾರ್ಮಿಕರು ನಿಯೋಜನೆಗೊಳ್ಳಲಿದ್ದಾರೆಯೆ ಎಂಬ ಕುರಿತು ಇಸ್ರೇಲ್ ನೊಂದಿಗೆ ಭಾರತವು ಚರ್ಚಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಷ್ಟನೆ ನೀಡಿತ್ತು. ಆದರೆ, ಮಾತುಕತೆಯ ಬೆನ್ನಿಗೇ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮವು ಉದ್ಯೋಗಾವಕಾಶಗಳಿಗಾಗಿ ವಿಸ್ತೃತ ದಾಖಲೆಯನ್ನು ಬಿಡುಗಡೆ ಮಾಡಿದೆ ಎಂದು The Hindu ಪತ್ರಿಕೆ ವರದಿ ಮಾಡಿದೆ.
ಈ ನಡುವೆ, ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧವು ನಾಲ್ಕನೆ ತಿಂಗಳಿಗೆ ಪ್ರವೇಶಿಸಿದ್ದು, ಈ ಯುದ್ಧದಲ್ಲಿ ಈವರೆಗೆ 24,000 ಮಂದಿ ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಗೆ ತೆರಳುತ್ತಿರುವ ಕಾರ್ಮಿಕರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಈ ನಡೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಚಿಂತಿಸುತ್ತಿದೆ.
“ಈ ನಡೆಯು ಭಾರತದ ನೈತಿಕತೆಗೆ ವಿರುದ್ಧವಾಗಿದೆ” ಎಂದು ಕಿಡಿ ಕಾರಿರುವ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್, “ನಾವು ಇಸ್ರೇಲ್ ನಲ್ಲಿ ಕದನ ವಿರಾಮಕ್ಕಾಗಿ ಆಗ್ರಹಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.







