"ದೊಡ್ಡವರು ಬರುತ್ತಾರೆ, ಮಲ ವಿಸರ್ಜಿಸುತ್ತಾರೆ, ನಾವದನ್ನು ತೆಗೆಯಬೇಕು, ನಾವು ಊಟ ಮಾಡಬೇಕಲ್ಲ, ಇದೇ ಜೀವನ!"
ಮಹಾ ಕುಂಭಮೇಳದಲ್ಲಿ ನೈರ್ಮಲ್ಯ ಕಾರ್ಮಿಕರ ಅಳಲು

ಮಹಾ ಕುಂಭಮೇಳ | PC : PTI
ಹೊಸದಿಲ್ಲಿ : ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಲಕ್ಷಾಂತರ ಯಾತ್ರಿಗಳು ತವಕಿಸುತ್ತಿದ್ದರೆ ಅವರ ಮಲಮೂತ್ರಗಳನ್ನು ತೆರವುಗೊಳಿಸಲು ಶೌಚಾಲಯ ಕಾರ್ಮಿಕರು ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಹಿಂದೂ ಜಾತಿ ವ್ಯವಸ್ಥೆಯ ತಳಮಟ್ಟದಲ್ಲಿ ಜನಿಸಿರುವ ಈ ಕಾರ್ಮಿಕರು ಕುಂಭಮೇಳವು ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ.
ಜ.13ರಂದು ಆರಂಭಗೊಂಡು ಫೆ.26ರವರೆಗೆ ಆರು ವಾರಗಳ ಕಾಲ ನಡೆಯಲಿರುವ ಮಹಾ ಕುಂಭಮೇಳದ ಅಂಗವಾಗಿ ತ್ರಿವೇಣಿ ಸಂಗಮದಲ್ಲಿ 40 ಕೋಟಿ ಯಾತ್ರಿಗಳು ಪುಣ್ಯಸ್ನಾನ ಮಾಡಲಿದ್ದಾರೆ ಎಂದು ಸಂಘಟಕರು ನಿರೀಕ್ಷಿಸಿದ್ದಾರೆ.
2,000 ಫುಟ್ಬಾಲ್ ಮೈದಾನಗಳಿಗಿಂತ ಹೆಚ್ಚು ವಿಸ್ತೀರ್ಣದ ಪ್ರದೇಶವನ್ನು ಆವರಿಸಿರುವ ನದಿದಂಡೆಯಲ್ಲಿನ ಶಿಬಿರಗಳಲ್ಲಿ 1.50 ಲಕ್ಷಕ್ಕೂ ಅಧಿಕ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಯಾತ್ರಿಕರ ದಟ್ಟಣೆಯು ತ್ಯಾಜ್ಯ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಬೃಹತ್ ಸವಾಲನ್ನು ಸೃಷ್ಟಿಸಿದೆ.
ಶೌಚಾಲಯಗಳ ಸ್ವಚ್ಛತೆಗೆಂದೇ ನೇಮಕಗೊಂಡಿರುವ 5,000 ಕಾರ್ಮಿಕರು ಈ ಮಹಾ ಉತ್ಸವವು ಸುಸೂತ್ರವಾಗಿ ನಡೆಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದಾರೆ.
ಬಹುತೇಕ ಈ ಎಲ್ಲ ಕಾರ್ಮಿಕರು ಹಿಂದೂಗಳನ್ನು ಅವರ ವೃತ್ತಿ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದಲ್ಲಿ ವಿಭಜಿಸಿರುವ ಶತಮಾನಗಳಷ್ಟು ಹಳೆಯದಾದ ಕಟ್ಟುನಿಟ್ಟಿನ ಜಾತಿ ವ್ಯವಸ್ಥೆಯ ಅತ್ಯಂತ ಕೆಳಗಿನ ಶ್ರೇಣಿಗೆ ಸೇರಿದವರಾಗಿದ್ದಾರೆ.
‘ನಾನು ಪದೇ ಪದೇ ಸ್ವಚ್ಛಗೊಳಿಸುತ್ತಲೇ ಇರುತ್ತೇನೆ. ಆದರೆ ಕೇವಲ 10 ನಿಮಿಷಗಳಲ್ಲಿ ಜನರು ಇದನ್ನು ಕೊಳಕಾಗಿಸುತ್ತಾರೆ’ ಎಂದು ಮಲದಿಂದ ತುಂಬಿ ಹೋಗಿದ್ದ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿದ್ದ ಸುರೇಶ ವಾಲ್ಮೀಕಿ ಹೇಳಿದರು. ಅವರ ಮಗ ವಿಕಾಸ ವಾಲ್ಮೀಕಿ (17) ಮುಂದಿನ ಗಬ್ಬುನಾರುತ್ತಿದ್ದ ಶೌಚಾಲಯವನ್ನು ಸ್ವಚ್ಛಗೊಳಿಸುವಲ್ಲಿ ನಿರತನಾಗಿದ್ದ.
ಅಧಿಕೃತ ಅಂಕಿ ಅಂಶಗಳ ಪ್ರಕಾರ, ನಗರ ಪ್ರದೇಶಗಳಲ್ಲಿ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವ ಪ್ರತಿ ಹತ್ತು ಕಾರ್ಮಿಕರ ಪೈಕಿ ಒಂಭತ್ತು ಜನರು ಕೆಳಜಾತಿಗಳಿಗೆ ಸೇರಿದವರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ದಲಿತರಾಗಿದ್ದಾರೆ.
ಐದು ವರ್ಷಗಳ ಹಿಂದೆ ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆದಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ಇಂತಹ ಐವರು ಕಾರ್ಮಿಕರ ಪಾದಗಳನ್ನು ತೊಳೆದಿದ್ದರು. ಮೋದಿಯವರ ಈ ಸಾಂಕೇತಿಕ ನಡೆಯು, ಅವರ ಮರುಚುನಾವಣೆಗೆ ತಿಂಗಳುಗಳ ಮುನ್ನ ಜಾತಿ ಭೇದಗಳನ್ನು ಬದಿಗೊತ್ತಿ ಸರ್ವ-ಹಿಂದು ಏಕತೆಗೆ ಮನವಿ ಮಾಡಿಕೊಳ್ಳುವ ಕಾರ್ಯತಂತ್ರದ ಭಾಗವಾಗಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಿಸಿದ್ದರು.
ಹುಟ್ಟಿನಿಂದಲೇ ಜಾತಿಯು ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖ ನಿರ್ಧಾರಕವಾಗಿ ಉಳಿದುಕೊಂಡಿದೆ. ಉನ್ನತ ಜಾತಿಗಳು ಸಾಂಸ್ಕೃತಿಕ-ಸಾಮಾಜಿಕ ಹಕ್ಕುಗಳ ಫಲಾನುಭವಿಗಳಾಗಿದ್ದರೆ ಕೆಳಜಾತಿಗಳು ತಾರಮ್ಯವನ್ನು ಅನುಭವಿಸುತ್ತಲೇ ಇವೆ.
ಆದರೆ ನೈರ್ಮಲ್ಯ ಕಾರ್ಮಿಕರು ತಮ್ಮ ಬಗ್ಗೆ ಆಳವಾಗಿ ಬೇರೂರಿರುವ ತಿರಸ್ಕಾರದ ಧೋರಣೆಗಳು ಒಂದೇ ಆಗಿವೆ ಮತ್ತು ಅನೇಕ ಜನರು ಶೌಚಾಲಯಗಳನ್ನು ಬಳಸಿದ ಬಳಿಕ ಸ್ವಚ್ಛಗೊಳಿಸಲು ನಿರಾಕರಿಸುತ್ತಾರೆ ಎನ್ನುತ್ತಾರೆ.
‘ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ನಮ್ಮ ಕೆಲಸ ಎಂದು ಜನರು ಹೇಳುತ್ತಾರೆ. ಅವರೇಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ?’ ಎಂದು ಹೇಳಿದ ಗೀತಾ ವಾಲ್ಮೀಕಿ ಕುಂಭಮೇಳದಲ್ಲಿ ಕೇವಲ ಮುನ್ನೂರು ಚಿಲ್ಲರೆ ರೂ.ಗಳ ದಿನಗೂಲಿಗಾಗಿ ದುಡಿಯಲು ಸುಮಾರು 200 ಕಿ.ಮೀ.ದೂರದಿಂದ ಬಂದಿದ್ದಾರೆ.
ಶೌಚಾಲಯಗಳಿಗೆ ನೀರಿನ ಸಂಪರ್ಕಗಳ ಕೊರತೆಯು ಈ ಕಾರ್ಮಿಕರ ಕೆಲಸವನ್ನು ಇನ್ನಷ್ಟು ಕಠಿಣಗೊಳಿಸಿದೆ.
ಅದು ಉದ್ದೇಶಪೂರ್ವಕವಾಗಿದೆ.ಇಲ್ಲದಿದ್ದರೆ ಸೆಪ್ಟಿಕ್ ಟ್ಯಾಂಕ್ಗಳನ್ನು ಪ್ರತಿ ಎರಡು ಗಂಟೆಗಳಿಗೊಮ್ಮೆ ಸ್ವಚ್ಛಗೊಳಿಸಬೇಕಾಗುತ್ತಿತ್ತು ಎಂದು ಸಂಘಟಕರು ಹೇಳಿದರು.
ಹೊರಗೆ ಪ್ರತಿ ಹತ್ತು ಶೌಚಾಲಯಗಳಿಗೆ ಒಂದು ನೀರಿನ ನಲ್ಲಿಯನ್ನು ಅಳವಡಿಸಲಾಗಿದ್ದು, ಬಳಕೆದಾರರು ಬಕೆಟ್ನಲ್ಲಿ ನೀರು ತುಂಬಿಕೊಂಡು ಹೋಗಬೇಕಿದೆ. ಆದರೆ ಬಕೆಟ್ಗಳ ಕೊರತೆಯಿಂದಾಗಿ ಜನರು ಬಾಟ್ಲಿಗಳಲ್ಲಿ ನೀರು ತುಂಬಿಕೊಳ್ಳುತ್ತಾರೆ. ತಮ್ಮ ಕೆಲಸವಾದ ಬಳಿಕ ಅವುಗಳನ್ನು ಶೌಚಾಲಯಗಳಲ್ಲೇ ಎಸೆಯುತ್ತಾರೆ. ಬಾಟ್ಲಿಗಳಲ್ಲಿ ನೀರು ಒಯ್ಯದಂತೆ ಸ್ವಚ್ಛತಾ ಕಾರ್ಮಿಕರು ಹೇಳಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಳ್ಳುತ್ತಲೇ ಇಲ್ಲ.
ಕೈಗಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಲು ಕಾರ್ಮಿಕರಿಗೆ ಜೆಟ್ ಸ್ಪ್ರೇ ಯಂತ್ರಗಳನ್ನು ಒದಗಿಸಲಾಗಿದೆಯಾದರೂ, ನೀರಿನ ಒತ್ತಡವು ಸಾಕಷ್ಟಿಲ್ಲ. ಹೀಗಾಗಿ ಅವುಗಳನ್ನು ಬಳಸುವುದೂ ಕಷ್ಟ.
‘ದೊಡ್ಡ ಜನರು ಬರುತ್ತಾರೆ. ಮಲವಿಸರ್ಜಿಸುತ್ತಾರೆ ಮತ್ತು ನಾವು ಅದನ್ನು ಸ್ವಚ್ಛಗೊಳಿಸಬೇಕು. ಏಕೆಂದರೆ ನಾವು ಊಟ ಮಾಡಬೇಕಲ್ಲ’ ಎಂದು ಹೇಳಿದ ಸಂಗೀತಾ ದೇವಿ(30), ‘ಇದುವೇ ಜೀವನ’ ಎಂದು ಉದ್ಗರಿಸಿದರು.
ಸೌಜನ್ಯ : AFP







