ಭಾರತದ ವಿವೇಕ್ ಅಗರ್ವಾಲ್ ಎಫ್ಎಟಿಎಫ್ ಉಪಾಧ್ಯಕ್ಷ

ವಿವೇಕ್ ಅಗರ್ವಾಲ್ Photo: x.com/DeccanHerald
ಹೊಸದಿಲ್ಲಿ: ಜಾಗತಿಕ ಮಟ್ಟದಲ್ಲಿ ಹಣ ದುರ್ಬಳಕೆ ಮತ್ತು ಭಯೋತ್ಪಾದನೆಗೆ ನೆರವು ನೀಡುವುದರ ವಿರುದ್ಧ ಮಾನದಂಡವನ್ನು ರೂಪಿಸುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಉಪಾಧ್ಯಕ್ಷ ಹುದ್ದೆ ಇದೇ ಮೊದಲ ಬಾರಿಗೆ ಭಾರತದ ಪಾಲಾಗಿದೆ. ಈ ಪ್ರಭಾವಿ ಅಂತರರಾಷ್ಟ್ರೀಯ ಸಂಸ್ಥೆಯ ಸದಸ್ಯರಾಷ್ಟ್ರವಾಗಿ ಭಾರತ 2010ರಿಂದ ಕಾರ್ಯ ನಿರ್ವಹಿಸುತ್ತಿದೆ.
ಪ್ಯಾರೀಸ್ನಲ್ಲಿ ನಡೆದ ಎಫ್ಎಟಿಎಫ್ ಅಧಿವೇಶನದ ಕೊನೆಯಲ್ಲಿ ಕೇಂದ್ರ ಸಾಂಸ್ಕೃತಿಕ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ. 2025ರ ಜುಲೈ 1ರಿಂದ ಈ ಹುದ್ದೆಯಲ್ಲಿರುವ ಬ್ರಿಟನ್ನ ಗಿಲ್ಸ್ ಥಾಮ್ಸನ್ ಅವರ ಸ್ಥಾನಕ್ಕೆ ಇದೀಗ ವಿವೇಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.
"ಬ್ರಿಟನ್ ಅಧ್ಯಕ್ಷೀಯ ದೇಶವಾಗಿ ಕಾರ್ಯ ನಿರ್ವಹಿಸುವ ಅವಧಿಯ ಆದ್ಯತೆಗಳನ್ನು ಸದಸ್ಯರು ಅನುಮೋದಿಸಿದ್ದು, ಭಾರತದ ವಿವೇಕ್ ಅಗರ್ವಾಲ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದೆ. 2026ರ ಜುಲೈನಿಂದ 2027ರ ಜೂನ್ರವರೆಗೆ ಅವರ ಅಧಿಕಾರಾವಧಿ ಇರುತ್ತದೆ" ಎಂದು ಎಫ್ಎಟಿಎಫ್ ಹೇಳಿಕೆ ವಿವರಿಸಿದೆ.
ವಿವೇಕ್ ಅಗರ್ವಾಲ್ ಅವರು 1994ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಮಧ್ಯಪ್ರದೇಶ ಕೇಡರ್ಗೆ ಸೇರಿದವರು. ಈ ಮೊದಲು ಕೂಡಾ ಎಫ್ಎಟಿಎಫ್ನಲ್ಲಿ ಭಾರತೀಯ ನಿಯೋಗದ ಮುಖ್ಯಸ್ಥರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.






