ಭದ್ರತಾ ಆತಂಕ | ಸೌದಿ ಅರೇಬಿಯಾದ 4 ನಗರಗಳಿಗೆ ನ. 30ರವರೆಗೆ ಇಂಡಿಗೋ ವಿಮಾನ ಹಾರಾಟ ಸ್ಥಗಿತ
ಜಿದ್ದಾ, ಮದೀನಾ, ರಿಯಾದ್, ದಮ್ಮಾಮ್ಗೆ ಸೇವೆ ರದ್ದು; ಏರ್ ಇಂಡಿಯಾ, ಅಕಾಸಾ ಏರ್ ನಿಂದಲೂ ವಿಮಾನ ಸೇವೆ ಸ್ಥಗಿತ

ಸಾಂದರ್ಭಿಕ ಚಿತ್ರ| Photo: PTI
ಹೊಸದಿಲ್ಲಿ: ಸೌದಿ ಅರೇಬಿಯಾದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕದ ಹಿನ್ನೆಲೆಯಲ್ಲಿ, ಆ ದೇಶಕ್ಕೆ ಮತ್ತು ಅಲ್ಲಿಂದ ಸಂಚರಿಸುವ ತನ್ನ ಎಲ್ಲ ವಿಮಾನಗಳ ಹಾರಾಟ ಸ್ಥಗಿತವನ್ನು ಇಂಡಿಗೋ ನ. 30ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಜಿದ್ದಾ, ಮದೀನಾ, ರಿಯಾದ್ ಮತ್ತು ದಮ್ಮಾಮ್ ನಗರಗಳಿಗೆ ವಿಮಾನಗಳ ಸಂಚಾರ ತಿಂಗಳ ಅಂತ್ಯದವರೆಗೆ ರದ್ದುಗೊಂಡಿದೆ.
ಯೆಮನ್ ನ ಹೂತಿ ಬಂಡುಕೋರರಿಂದ ನಡೆಯುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಸೌದಿ ಅರೇಬಿಯಾದಲ್ಲಿ ಭದ್ರತಾ ಕಳವಳವನ್ನು ಹೆಚ್ಚಿಸಿವೆ. ಪದೇ ಪದೇ ನಡೆಯುತ್ತಿರುವ ಈ ದಾಳಿಗಳಿಂದ ವಾಣಿಜ್ಯ ವಿಮಾನಯಾನ ಸೇವೆಗಳಿಗೂ ಅಡ್ಡಿಯುಂಟಾಗಿದೆ. ಹೀಗಾಗಿ ವಿಮಾನಯಾನ ಸಂಸ್ಥೆಗಳು ಈ ಪ್ರದೇಶದಲ್ಲಿನ ತಮ್ಮ ಕಾರ್ಯಾಚರಣೆಗಳನ್ನು ನಿಲ್ಲಿಸಿವೆ.
ಪ್ರಮುಖ ನಗರಗಳು, ವಿಮಾನ ನಿಲ್ದಾಣಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳ ಮೇಲೆ ದಾಳಿಗಳು ಹಾಗೂ ಬೆದರಿಕೆಗಳು ಪರಿಣಾಮ ಬೀರುತ್ತಿರುವುದರಿಂದ ವಿಮಾನಯಾನ ಸಂಸ್ಥೆಗಳು ಸೇವೆಗಳನ್ನು ಸ್ಥಗಿತಗೊಳಿಸುತ್ತಿವೆ ಅಥವಾ ವೇಳಾಪಟ್ಟಿಯನ್ನು ಬದಲಾಯಿಸಿ ವಿಮಾನಗಳನ್ನು ನಿರ್ವಹಿಸುತ್ತಿವೆ. ಇದರಿಂದ ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.
ಬುಧವಾರ ಹೊರಡಿಸಿದ ಪ್ರಯಾಣ ಸಲಹೆಯಲ್ಲಿ, ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸುವಾಗ ನೀಡಿರುವ ಸಂಪರ್ಕ ವಿವರಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಇಂಡಿಗೋ ತಿಳಿಸಿದೆ. ಭದ್ರತಾ ಪರಿಸ್ಥಿತಿಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವ ಅವಧಿಯಲ್ಲಿ ಪ್ರಯಾಣಿಕರಿಗೆ ಅಗತ್ಯ ನೆರವು ನೀಡುವುದನ್ನು ಮುಂದುವರಿಸುವುದಾಗಿ ಹೇಳಿದೆ.
'ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆಯೇ ನಮ್ಮ ಅತ್ಯುನ್ನತ ಆದ್ಯತೆ' ಎಂದು ಇಂಡಿಗೋ ತಿಳಿಸಿದೆ.
ಏರ್ ಇಂಡಿಯಾ, ಅಕಾಸಾ ಏರ್ ನಿಂದಲೂ ವಿಮಾನ ಸಂಚಾರ ಸ್ಥಗಿತ
ಸೌದಿ ಅರೇಬಿಯಾದಲ್ಲಿನ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಕೂಡ ತಮ್ಮ ಸೇವೆಗಳ ಸ್ಥಗಿತವನ್ನು ವಿಸ್ತರಿಸಿವೆ.
ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ನ.30ರವರೆಗೆ ರಿಯಾದ್ ಮತ್ತು ದಮ್ಮಾಮ್ ಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿವೆ. ಜೆಡ್ಡಾಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಸೇವೆಯನ್ನು ನ.21ರವರೆಗೆ ರದ್ದುಗೊಳಿಸಿವೆ.
ಅಕಾಸಾ ಏರ್ ಕೂಡ ಜಿದ್ದಾ ಮತ್ತು ರಿಯಾದ್ ಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳ ಸಂಚಾರ ಸ್ಥಗಿತವನ್ನು ನ. 30ರವರೆಗೆ ವಿಸ್ತರಿಸಿದೆ.
ಇಂಡಿಗೋ ಈ ಹಿಂದೆ ಜಿದ್ದಾ ಮತ್ತು ಮದೀನಾಗೆ ವಿಮಾನಗಳ ಸಂಚಾರವನ್ನು ನ.21ರವರೆಗೆ ಸ್ಥಗಿತಗೊಳಿಸಿತ್ತು. ರಿಯಾದ್ ಮತ್ತು ದಮ್ಮಾಮ್ ಗೆ ವಿಮಾನಗಳ ಹಾರಾಟವನ್ನು ನ.30ರವರೆಗೆ ರದ್ದುಗೊಳಿಸಿತ್ತು. ಇದೀಗ ಹೊರಡಿಸಿರುವ ಹೊಸ ಪ್ರಯಾಣ ಸಲಹೆಯ ಮೂಲಕ ಜಿದ್ದಾ ಮತ್ತು ಮದೀನಾಗೆ ವಿಮಾನಗಳ ಸಂಚಾರ ಸ್ಥಗಿತದ ಅವಧಿಯನ್ನೂ ನ. 30ರವರೆಗೆ ವಿಸ್ತರಿಸಿದೆ. ಈ ಮೂಲಕ ಸೌದಿ ಅರೇಬಿಯಾದ 4 ನಗರಗಳಿಗೆ ಇಂಡಿಗೋ ವಿಮಾನಗಳ ಹಾರಾಟ ತಿಂಗಳ ಅಂತ್ಯದವರೆಗೆ ಸ್ಥಗಿತಗೊಂಡಿದೆ.






