ಇನ್ಪೋಸಿಸ್ ಗೆ ರಿಲೀಫ್: 32,400 ಕೋಟಿ ರೂ. ತೆರಿಗೆಗೆ ಸಂಬಂಧಿಸಿ ನೀಡಲಾಗಿದ್ದ ಪ್ರೀ ಶೋಕಾಸ್ ನೋಟಿಸ್ ಮುಕ್ತಾಯಗೊಳಿಸಿದ ಡಿಜಿಜಿಐ

ಹೊಸದಿಲ್ಲಿ: 2018-19ರಿಂದ 2021-22ನೇ ಹಣಕಾಸು ವರ್ಷಗಳ ನಡುವಿನ 32,403 ಕೋಟಿ ರೂ. ಮೊತ್ತದ GST ಬಾಕಿಗೆ ಸಂಬಂಧಿಸಿದಂತೆ ಇನ್ಫೋಸಿಸ್ ಸಂಸ್ಥೆಗೆ ಜಾರಿಗೊಳಿಸಲಾಗಿದ್ದ ಪ್ರೀ ಶೋಕಾಸ್ ನೋಟಿಸ್ ಅನ್ನು ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು ಮುಕ್ತಾಯಗೊಳಿಸಿದ್ದು, ಇದರಿಂದಾಗಿ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಇನ್ಫೋಸಿಸ್ ನಿರಾಳವಾಗಿದೆ.
ಈ ಕ್ರಮದಿಂದಾಗಿ, ಸುಮಾರು ಎರಡು ವರ್ಷಗಳಿಂದ ಭಾರತದ ಎರಡನೆ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಇನ್ಫೋಸಿಸ್ ನಡೆಸುತ್ತಿದ್ದ ಕಾನೂನು ಹೋರಾಟ ಅಂತ್ಯಗೊಂಡಿದೆ.
2017ರಿಂದ ಐದು ವರ್ಷಗಳ ಕಾಲ ತನ್ನ ಸಾಗರೋತ್ತರ ಶಾಖೆಗಳಿಂದ ಪಡೆದಿದ್ದ ಸೇವೆಗಳಿಗಾಗಿ ಸರಕು ಮತ್ತು ಸೇವಾ ತೆರಿಗೆ ಪ್ರಾಧಿಕಾರಗಳು ಕಳೆದ ವರ್ಷದ ಮಧ್ಯಭಾಗದಲ್ಲಿ ಇನ್ಫೋಸಿಸ್ ಸಂಸ್ಥೆಗೆ 32,403 ಕೋಟಿ ರೂ. ಮೊತ್ತದ ನೋಟಿಸ್ ಅನ್ನು ಜಾರಿಗೊಳಿಸಿದ್ದವು. ಆದರೆ, ಈ ಜಿಎಸ್ಟಿ ಬೇಡಿಕೆಯು ಇನ್ಫೋಸಿಸ್ ನ 2025ರ ಹಣಕಾಸು ವರ್ಷದ ಲಾಭವಾದ 26,713 ಕೋಟಿ ಮೊತ್ತವನ್ನೂ ಮೀರಿತ್ತು. ಹೀಗಾಗಿ, ಈ ಪ್ರೀ ಶೋಕಾಸ್ ನೋಟಿಸ್ ನ ಮುಕ್ತಾಯವು ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆ ಇನ್ಪೋಸಿಸ್ ಗೆ ಭಾರಿ ರಿಲೀಫ್ ಮಾಡಿದೆ.