ಮೊಮೊ ಮಾರಾಟದಿಂದ ದಿನಕ್ಕೆ ಲಕ್ಷ ರೂಪಾಯಿ ಗಳಿಕೆ : ಇನ್ಸ್ಟಾಗ್ರಾಂನಲ್ಲಿ ವಿಡಿಯೊ ವೈರಲ್

PC | ndtv
ಹೊಸದಿಲ್ಲಿ: ಮೊಮೊ ಮಾರಾಟಗಾರನೊಬ್ಬ ಬಿಕಾಂ ಪದವೀಧರನಿಗಿಂತ ಹೆಚ್ಚು ಆದಾಯ ಗಳಿಸಲು ಸಾಧ್ಯವೇ? ಎಂಬ ಪ್ರಶ್ನೆಯೊಂದಿಗೆ ಇನ್ಸ್ಟಾಗ್ರಾಂನಲ್ಲಿ ಕಿರು ವಿಡಿಯೊ ಪೋಸ್ಟ್ ಮಾಡಿದ ಕಂಟೆಂಟ್ ಕ್ರಿಯೆಟರ್ ಕ್ಯಾಸಿ ಪೆರೇರಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ನಾಂದಿ ಹಾಡಿದ್ದಾರೆ.
ರಸ್ತೆ ಬದಿಯ ಮೊಮೊ ಸ್ಟಾಲ್ ನಲ್ಲಿ ಒಂದು ದಿನ ಕೆಲಸ ಮಾಡುವ ದೃಶ್ಯಾವಳಿಯನ್ನು ಈ ತುಣುಕಿನಲ್ಲಿ ಪೆರೇರಾ ದಾಖಲಿಸಿದ್ದಾರೆ. ಗ್ರಾಹಕರಿಗೆ ನೀಡುವುದು ಹೇಗೆ ಹಾಗೂ ಒಂದು ಪ್ಲೇಟ್ನಲ್ಲಿ ಎಷ್ಟು ಮೊಮೋಗಳು ಇರುತ್ತವೆ ಎನ್ನುವ ಮೂಲ ಅಂಶಗಳನ್ನು ಕಲಿತುಕೊಳ್ಳುವಲ್ಲಿಂದ ಅವರು ದಿನವನ್ನು ಆರಂಭಿಸಿದರು. ಮೊದಲು ಅಧೀರರಾದಂತೆ ಕಂಡುಬಂದರೂ, ಗ್ರಾಹಕರು ಲಗ್ಗೆ ಇಡುತ್ತಿದ್ದಂತೇ ಆರಾಮವಾಗಿ ಕಾರ್ಯ ನಿಭಾಯಿಸಿದರು. ಈ ಅಂಗಡಿ ಎಷ್ಟರಮಟ್ಟಿಗೆ ಪ್ರಖ್ಯಾತವಾಗಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮೊದಲ ಒಂದು ಗಂಟೆಯಲ್ಲಿ 118 ಪ್ಲೇಟ್ ಮೊಮೋ ಮಾರಿದ ಪೆರೇರಾ ಆ ಬಳಿಕ ಮೊಮೋಸ್ ಕರಿಯುವುದು, ನೀಡಲು ಸಿದ್ಧತೆ ಮಾಡಿಕೊಳ್ಳುವುದು, ನೀರು ಮರು ಭರ್ತಿ, ಬಿಸಿ ಸೂಪ್ ಕುದಿಸುವುದು ಮುಂತಾದ ಕಾರ್ಯಗಳಿಗಾಗಿ ಅಲ್ಪಕಾಲ ವಿರಾಮ ನೀಡಿದರು. ಸಂಜೆ 5 ರಿಂದ ರಾತ್ರಿ 10ರವರೆಗೆ 950 ಪ್ಲೇಟ್ ಮೊಮೋವನ್ನು ಪ್ಲೇಟ್ಗೆ 110 ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದಾಗಿ ಪೆರೇರಾ ಹೇಳಿದ್ದಾರೆ. ದಿನದ ಆದಾಯ 1,04,500 ರೂಪಾಯಿ. ಇದೇ ವ್ಯಾಪಾರ ಮುಂದುವರಿದರೆ ತಿಂಗಳ ಆದಾಯ 31.35 ಲಕ್ಷ ರೂಪಾಯಿ ಎಂಬ ಲೆಕ್ಕಾಚಾರ ಅವರದ್ದು.
ಔಪಚಾರಿಕ ಪದವಿಯಲ್ಲದೇ ಆದಾಯ ಗಳಿಕೆ ಅವಕಾಶಗಳ ಬಗೆಗಿನ ಚರ್ಚೆಗೆ ಇದು ಗ್ರಾಸವಾಗಿದೆ. ಬಿಕಾಂ ಪದವೀಧರ ಸ್ನೇಹಿತರೊಂದಿಗೆ ಹಾಸ್ಯಮಯವಾಗಿ ಈ ವಿಡಿಯೊವನ್ನು ಹಲವರು ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೊ ಈಗಾಗಲೇ 18 ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ. ವಿಡಿಯೊ ನೋಡಿ ಅಚ್ಚರಿಯಿಂದ ಹಲವು ವೀಕ್ಷಕರು ಉದ್ಗರಿಸಿದ್ದಾರೆ.
ಒಬ್ಬರು ತಪ್ಪನ್ನು ತಿದ್ದಿ ಇದು 'ಮೊಮೊ' ಮೊಮೋಸ್ ಅಲ್ಲ ಎಂದು ಸ್ಪಷ್ಟಪಡಿಸಿದ್ದರೆ, ಮತ್ತೊಬ್ಬರು ಹಾಸ್ಯಮಯವಾಗಿ ಇಷ್ಟು ನಾನು ಇಡೀ ವರ್ಷದಲ್ಲೂ ಗಳಿಸುವುದಿಲ್ಲ ಎಂದು ಹೇಳಿದ್ದಾರೆ. ಹಲವರು "ಕೆಲಸ ಖಾಲಿ ಇದೆಯೇ" ಎಂದ ಹಾಸ್ಯಮಯವಾಗಿ ಪ್ರಶ್ನಿಸಿ "ಭೈಯ್ಯಾ ಕಾಮ್ ಪೇ ಲಗಾ ಲೋ ಪ್ಲೀಸ್" ಎಂದು ಹೇಳಿದ್ದಾರೆ. "ಪ್ರತಿಯೊಬ್ಬರ ಗಳಿಕೆಯೂ ಬಿಕಾಂ ಪದವೀಧರರಿಗಿಂತ ಹೆಚ್ಚು" ಎಂದು ಮತ್ತೊಬ್ಬರು ವಿಶ್ಲೇಷಿಸಿದ್ದಾರೆ.







