ಪಕ್ಷಿ ಸಂರಕ್ಷಣೆ ಕುರಿತು ಫೆ.5 ರಿಂದ ಅಂತರರಾಷ್ಟ್ರೀಯ ಕಾರ್ಯಾಗಾರ
ಕಾನೂನುಬಾಹಿರ ಬೇಟೆಗೆ ಕಡಿವಾಣ ; ‘ಪಾಟ್ನಾ ಘೋಷಣೆ’ ಮಂಡನೆ

Photo : TheQuint.com
ಪಾಟ್ನಾ (ಬಿಹಾರ) : ಸೆಂಟ್ರಲ್ ಏಶ್ಯನ್ ಫ್ಲೈವೇ (ಸಿಎಎಫ್) ವ್ಯಾಪ್ತಿಯಲ್ಲಿರುವ ದೇಶಗಳಲ್ಲಿ ವನ್ಯ ಮತ್ತು ವಲಸೆ ಪಕ್ಷಿಗಳ ಕಾನೂನುಬಾಹಿರ ಬೇಟೆಯನ್ನು ತಡೆಯುವ ಪ್ರಯತ್ನವಾಗಿ ಮತ್ತು ಅವುಗಳ ಸಂರಕ್ಷಣಾ ಪ್ರಯತ್ನಗಳನ್ನು ಬಲಗೊಳಿಸಲು ಕ್ರಮಗಳನ್ನು ಸೂಚಿಸಲು ಪಾಟ್ನಾದಲ್ಲಿ ಫೆ.5 ರಿಂದ ಮೂರು ದಿನಗಳ ಅಂತರರಾಷ್ಟ್ರೀಯ ಕಾರ್ಯಾಗಾರ ನಡೆಯಲಿದೆ.
ಸಿಎಎಫ್ ಆರ್ಕ್ಟಿಕ್ ಮತ್ತು ಹಿಂದು ಮಹಾಸಾಗರಗಳ ನಡುವಿನ ಪಕ್ಷಿಗಳ ಪ್ರಮುಖ ವಲಸೆ ಮಾರ್ಗವಾಗಿದ್ದು, 30 ದೇಶಗಳು ಇದರ ವ್ಯಾಪ್ತಿಯಲ್ಲಿವೆ.
ಬಿಹಾರ ಸರಕಾರದ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ (ಡಿಇಎಫ್ಸಿಸಿ) ಇಲಾಖೆಯು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸಹಯೋಗದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಿದೆ.
ಭಾರತದಾದ್ಯಂತದಿಂದ ಹಾಗೂ ಮ್ಯಾನ್ಮಾರ್, ಕಝಖಸ್ತಾನ್, ಸಿಂಗಾಪುರ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಭೂತಾನಗಳಂತಹ ದೇಶಗಳಿಂದ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ಮೂರು ದಿನಗಳ ಅಂತರರಾಷ್ಟ್ರೀಯ ಕಾರ್ಯಾಗಾರದಲ್ಲಿ ಬಿಹಾರ ಸರಕಾರವು ‘ಪಾಟ್ನಾ ಘೋಷಣೆ ’ಯನ್ನು ಮಂಡಿಸಲಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಡಿಇಎಫ್ಸಿಸಿ ಕಾರ್ಯದರ್ಶಿ ವಂದನಾ ಪ್ರೇಯಶಿ ಅವರು, ಸಿಎಎಫ್ಗೆ ಸಂಬಂಧಿಸಿದಂತೆ ಪಕ್ಷಿಗಳ ಸಂರಕ್ಷಣೆಗೆ ರಾಜ್ಯದ ಕ್ರಿಯಾ ಯೋಜನೆಯ ಕುರಿತು ಘೋಷಣೆಯು ಪ್ರಸ್ತಾವಿಸಲಿದೆ. ಸಿಎಎಫ್ ಪ್ರದೇಶದಲ್ಲಿ ಪಕ್ಷಿಗಳ ಅಕ್ರಮ ಬೇಟೆ, ಅವುಗಳ ಖರೀದಿ ಮತ್ತು ಮಾರಾಟವನ್ನು ನಿರ್ಬಂಧಿಸಲು ಕಾರ್ಯತಂತ್ರಗಳನ್ನು ರೂಪಿಸುವ ಹಾಗೂ ಸಂಘಟಿತ ಕ್ರಮಗಳ ಬಗ್ಗೆಯೂ ಘೋಷಣೆಯು ಪ್ರಸ್ತಾವಿಸಲಿದೆ ಎಂದು ಹೇಳಿದರು.
40 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ 52ಕ್ಕೂ ಅಧಿಕ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ಭಾರತದಲ್ಲಿ ವೈವಿಧ್ಯಮಯ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ದೇಶದ ನೈಸರ್ಗಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಆದರೆ ಈ ಸುಂದರ ಪಕ್ಷಿಗಳು ಆವಾಸ ಸ್ಥಾನ ನಷ್ಟದಿಂದ ಹಿಡಿದು ಹವಾಮಾನ ಬದಲಾವಣೆಯವರೆಗೆ ಹಲವಾರು ಅಪಾಯಗಳನ್ನು ಎದುರಿಸುತ್ತಿವೆ. ಅವುಗಳ ಭವಿಷ್ಯಕ್ಕಾಗಿ ಸಂಘಟಿತ ಪ್ರಯತ್ನಗಳು ಅಗತ್ಯವಾಗಿವೆ. ಹೆಚ್ಚಿನ ದೇಶಗಳಲ್ಲಿ ಸ್ಪಷ್ಟವಾದ ನಿಯಮಾವಳಿಗಳು ಅಸ್ತಿತ್ವದಲ್ಲಿವೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಠಾನವನ್ನು ಹೆಚ್ಚಿಸಬೇಕಿದೆ. ಕಾರ್ಯಾಗಾರದಲ್ಲಿ ಈ ಎಲ್ಲ ಅಂಶಗಳನ್ನು ಚರ್ಚಿಸಿ ಪರಿಣಾಮಕಾರಿ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದೂ ಪ್ರೇಯಶಿ ತಿಳಿಸಿದರು.







