ಮಕ್ಕಳಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್
ವಯೋಮಾನ ಆಧಾರಿತ ನಿರ್ಬಂಧಕ್ಕೆ ವಿರೋಧ; ಆನ್ಲೈನ್ ಲೈಂಗಿಕ ದೌರ್ಜನ್ಯ ತಡೆಗೆ ಕಠಿಣ ನಿಯಮಾವಳಿಗೆ ಕರೆ

ಸುಪ್ರೀಂ ಕೋರ್ಟ್ (Photo: PTI)
ಹೊಸದಿಲ್ಲಿ: ಮಕ್ಕಳಿಗೂ ಇಂಟರ್ನೆಟ್ ಬಳಸುವ ಮೂಲಭೂತ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಕ್ಕಳ ಇಂಟರ್ನೆಟ್ ಬಳಕೆಗೆ ವಯೋಮಾನ ಆಧಾರಿತ ನಿರ್ಬಂಧ ಹೇರುವುದನ್ನು ತಿರಸ್ಕರಿಸಿರುವ ನ್ಯಾಯಾಲಯ, ಆನ್ಲೈನ್ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಕಠಿಣ ನಿಯಮಾವಳಿಗಳ ಚೌಕಟ್ಟು ರೂಪಿಸುವ ಅಗತ್ಯವನ್ನು ಒತ್ತಿಹೇಳಿದೆ.
ಮಕ್ಕಳಿಗೆ ಇಂಟರ್ನೆಟ್ ಬಳಕೆ ಸಂಪೂರ್ಣವಾಗಿ ನಿರಾಕರಿಸುವ ಬದಲು, ಅವರ ಹಕ್ಕುಗಳಿಗೆ ಧಕ್ಕೆಯಾಗದಂತೆ ಸುರಕ್ಷತೆ ಖಾತರಿಪಡಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಕ್ಕಳ ಸುರಕ್ಷತೆ ಮತ್ತು ಸ್ವಾತಂತ್ರ್ಯ ಪರಸ್ಪರ ವಿರುದ್ಧವಾದವುಗಳಲ್ಲ ಎಂಬುದನ್ನು ಅದು ಸ್ಪಷ್ಟಪಡಿಸಿದೆ.
ಆನ್ಲೈನ್ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ಚಿತ್ರಣಗಳನ್ನು ತ್ವರಿತವಾಗಿ ಪತ್ತೆಹಚ್ಚಿ ತೆಗೆದುಹಾಕುವ ವ್ಯವಸ್ಥೆಯನ್ನು ರೂಪಿಸುವುದು ಸೇರಿದಂತೆ, ಮಕ್ಕಳ ರಕ್ಷಣೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ನಿರ್ಬಂಧಗಳಿಂದಲೇ ಅಪಾಯ ಹೆಚ್ಚುವ ಸಾಧ್ಯತೆ
ವಯೋಮಾನ ಆಧಾರಿತ ನಿರ್ಬಂಧಗಳು ಮಕ್ಕಳನ್ನು ನಿಯಂತ್ರಣವಿಲ್ಲದ ಹಾಗೂ ಹೆಚ್ಚು ಅಪಾಯಕಾರಿ ವೆಬ್ಸೈಟ್ ಗಳತ್ತ ತಳ್ಳುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಇಂತಹ ನಿರ್ಬಂಧಗಳು ಮಕ್ಕಳನ್ನು ಆನ್ಲೈನ್ ಅಪಾಯಗಳಿಂದ ಸಂಪೂರ್ಣವಾಗಿ ರಕ್ಷಿಸಲಾರವು ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ.
ಆನ್ಲೈನ್ ನಲ್ಲಿ ಆಮಿಷಕ್ಕೆ ಒಳಗಾದ ಅಥವಾ ಬೆದರಿಕೆಗೆ ಗುರಿಯಾದ ಮಕ್ಕಳು, ಇಂಟರ್ನೆಟ್ ಬಳಕೆಯ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆಯಾಗಬಹುದು ಎಂಬ ಭಯದಿಂದ ಪೋಷಕರಿಗೆ ಅಥವಾ ವಿಶ್ವಾಸಾರ್ಹ ವಯಸ್ಕರಿಗೆ ವಿಷಯ ತಿಳಿಸಲು ಹಿಂಜರಿಯಬಹುದು ಎಂದು ನ್ಯಾಯಾಲಯ ಗಮನಿಸಿದೆ.
ಮಕ್ಕಳಿಗೆ ಡಿಜಿಟಲ್ ಜಗತ್ತಿನ ಪ್ರವೇಶವನ್ನು ನಿರಾಕರಿಸುವುದಕ್ಕಿಂತ, ಆನ್ಲೈನ್ ಅಪಾಯಗಳಿಂದ ಅವರನ್ನು ರಕ್ಷಿಸುವ ಪರಿಣಾಮಕಾರಿ ವ್ಯವಸ್ಥೆ ರೂಪಿಸುವುದು ಮುಖ್ಯ ಎಂಬ ನಿಲುವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.






