Iran ಯುದ್ಧ | ಭಾರತೀಯ ಕಾಫಿ ರಫ್ತಿಗೆ ತೀವ್ರ ಹೊಡೆತ

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಎ.12: ದಶಕಗಳಿಂದಲೂ ದುಬೈ, ಕುವೈಟ್ ನಗರ ಮತ್ತು ರಿಯಾದ್ ನಲ್ಲಿನ ಕೆಫೆಗಳಲ್ಲಿ ಜನಪ್ರಿಯವಾಗಿರುವ ಭಾರತೀಯ ಕಾಫಿ ಈಗ ಹೆಚ್ಚುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ನೌಕಾ ದಿಗ್ಬಂಧನದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಪಶ್ಚಿಮ ಏಶ್ಯಾದ ಮಾರುಕಟ್ಟೆಗಳಲ್ಲಿ ಭಾರತದ ಕಾಫಿ ವ್ಯಾಪಾರವು ಶೇ.80ರಷ್ಟು ಕುಸಿಯುವ ಭೀತಿಯನ್ನು ಉದ್ಯಮವು ಎದುರಿಸುತ್ತಿದೆ ಎಂದು ‘ನಿಕ್ಕೀ ಏಶ್ಯಾ’ ವರದಿ ಮಾಡಿದೆ.
ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದ್ದರೂ, ವ್ಯಾಪಾರ ಮಾರ್ಗಗಳು ಅಡಚಣೆಗಳಿಂದ ಮುಕ್ತಗೊಂಡಿಲ್ಲ. ಅತಿಯಾಗಿ ಏರಿಕೆಯಾಗಿರುವ ಸಾಗಾಣಿಕೆ ವೆಚ್ಚವು ಕಾಫಿ ಉದ್ಯಮವನ್ನು ಕಂಗೆಡಿಸಿದೆ.
ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ 21 ಗಂಟೆಗಳ ಕಾಲ ನಡೆದ ಸುದೀರ್ಘ ಶಾಂತಿ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿವೆ. ಇದು ಸಂಕಷ್ಟದಿಂದ ಪಾರಾಗುವ ಕಾಫಿ ಉದ್ಯಮದ ವಿಶ್ವಾಸವನ್ನು ಇನ್ನಷ್ಟು ಕುಗ್ಗಿಸಿದೆ.
ಮಾತುಕತೆ ವಿಫಲಗೊಂಡಿರುವುದು ಭಾರತೀಯ ಕಾಫಿ ರಫ್ತುದಾರರಿಗೆ ಹಾರ್ಮುಝ್ ಜಲಸಂಧಿ ಬಿಕ್ಕಟ್ಟು ಸುದೀರ್ಘ ಕಾಲ ಮುಂದುವರಿಯಬಹುದು ಎಂಬ ಸಂಕೇತವಾಗಿದೆ.
ಭಾರತವು ವಿಶ್ವದ ಏಳನೇ ಅತಿ ದೊಡ್ಡ ಕಾಫಿ ಉತ್ಪಾದಕ ದೇಶವಾಗಿದ್ದು, ತನ್ನ ಉತ್ಪಾದನೆಯ ಸುಮಾರು ಶೇ.70ರಷ್ಟನ್ನು ರಫ್ತು ಮಾಡುತ್ತಿದೆ. ಕಳೆದೊಂದು ದಶಕದಲ್ಲಿ ಪಶ್ಚಿಮ ಏಶ್ಯಾದಲ್ಲಿ ತನ್ನ ನೆಲೆಯನ್ನು ಸ್ಥಿರವಾಗಿ ವಿಸ್ತರಿಸಿಕೊಂಡಿದ್ದು, 2024ರಲ್ಲಿ ತನ್ನ ಒಟ್ಟು ರಫ್ತಿನ ಶೇ.16ಕ್ಕೂ ಅಧಿಕ ಕಾಫಿಯನ್ನು ಯುಎಇ, ಜೋರ್ಡಾನ್ ಮತ್ತು ಸೌದಿ ಅರೇಬಿಯಗಳಂತಹ ಮಾರುಕಟ್ಟೆಗಳಿಗೆ ರವಾನಿಸಿತ್ತು.
ಭಾರತೀಯ ಕಾಫಿ ರಫ್ತುದಾರರ ಸಂಘದ ಅಧ್ಯಕ್ಷ ರಮೇಶ ರಾಜಾ ಅವರ ಪ್ರಕಾರ, ರಫ್ತುದಾರರು ಮುಂಬರುವ ತಿಂಗಳುಗಳಲ್ಲಿ ಪಶ್ಚಿಮ ಏಶ್ಯಾ ಮಾರುಕಟ್ಟೆಯಲ್ಲಿ ಶೇ.80ರಷ್ಟು ನಷ್ಟವನ್ನು ಎದುರಿಸಬಹುದು. ಹೆಚ್ಚಿನ ಭಾರತೀಯ ಕಾಫಿ ಹಾರ್ಮುಝ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಹಡಗುಗಳ ಮಾರ್ಗ ಬದಲಾವಣೆ ಮತ್ತು ವಿಳಂಬವು ನಷ್ಟಕ್ಕೆ ಪ್ರಮುಖ ಕಾರಣಗಳಾಗಿವೆ.
ಸಾಗಾಣಿಕೆ ಸಮಸ್ಯೆಯಿಂದಾಗಿ ಐರೋಪ್ಯ ಖರೀದಿದಾರರು ಈಗಾಗಲೇ ಉಗಾಂಡಾದಂತಹ ಪರ್ಯಾಯ ದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇದು ಭಾರತವು ಕಷ್ಟಪಟ್ಟು ಗಳಿಸಿರುವ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವ ಭೀತಿಯನ್ನುಂಟು ಮಾಡಿದೆ.
ಭಾರತದ ಕಾಫಿ ಉದ್ಯಮವು ತನ್ನ ಸುವರ್ಣ ಯುಗದಲ್ಲಿತ್ತು. ಭಾರತೀಯ ಕಾಫಿ ಮಂಡಳಿಯ ಪ್ರಕಾರ, 2023ರಲ್ಲಿ 1.4 ಶತಕೋಟಿ ಡಾಲರ್ಗಳಿದ್ದ ಅದರ ರಫ್ತು ಗಳಿಕೆ ಕಳೆದ ವರ್ಷ ಇಮ್ಮಡಿಗೊಂಡು ದಾಖಲೆಯ 2.13 ಶತಕೋಟಿ ಡಾಲರ್ಗೆ ತಲುಪಿತ್ತು. ವಾರ್ಷಿಕ ಉತ್ಪಾದನೆಯು ಸುಮಾರು 3.5 ಲಕ್ಷ ಮೆಟ್ರಿಕ್ ಟನ್ಗಳಿಂದ 3.70 ಲಕ್ಷ ಮೆಟ್ರಿಕ್ ಟನ್ಗಳಷ್ಟಿದ್ದು, ಇದು ಜಾಗತಿಕ ಉತ್ಪಾದನೆಯ ಶೇ.3ರಿಂದ ಶೇ.4ರಷ್ಟಾಗಿದೆ.






