ಅಮೆರಿಕ ಯಾವ ಹೊತ್ತಿನಲ್ಲಾದರೂ ದಾಳಿ ನಡೆಸಲು ಬಯಸಿದೆ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಆರೋಪ
“ಇರಾನ್ ಇನ್ನೆಂದೂ ಅಮೆರಿಕವನ್ನು ನಂಬುವುದಿಲ್ಲ”

ಅಬ್ಬಾಸ್ ಅರಾಗ್ಚಿ | PC : X \ @IranNewsX
ಟೆಹ್ರಾನ್: ‘ಅಮೆರಿಕದ ಮನಸ್ಸಿನಲ್ಲಿ ಬೇರೇನೊ ಇರಬೇಕು. ಅದು ಯಾವುದೇ ಹೊತ್ತಿನಲ್ಲಾದರೂ ಇರಾನ್ ಮೇಲೆ ದಾಳಿ ನಡೆಸಲು ಬಯಸುತ್ತಿದೆ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಆರೋಪಿಸಿದ್ದಾರೆ.
ಈ ಕುರಿತು NBC ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಸಂಧಾನದ ಪರಿಹಾರದ ಮೂಲಕ ಈ ಬಿಕ್ಕಟ್ಟನ್ನು ಬಗೆಹರಿಸುವ ನಿರ್ಧಾರ ಪ್ರದರ್ಶಿಸುವುದನ್ನು ನಾನು ಅಮೆರಿಕಕ್ಕೆ ಬಿಡುತ್ತೇನೆ. ಅವರ ಮನಸ್ಸಿನಲ್ಲಿ ಬೇರೇನೋ ಇರಬೇಕು. ಅವರು ಯಾವುದೇ ಹೊತ್ತಿನಲ್ಲಾದರೂ ಇರಾನ್ ಮೇಲೆ ದಾಳಿ ನಡೆಸಲು ಬಯಸುತ್ತಿರಬಹುದು” ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಇರಾನ್ ಹಾಗೂ ಇಸ್ರೇಲ್ ನಡುವೆ ಮುಂದುವರಿದಿರುವ ಬಿಕ್ಕಟ್ಟನ್ನು ಮುಂದಿನ ಎರಡು ವಾರಗಳಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ ಎಂದು ಈ ಬಿಕ್ಕಟ್ಟಿನ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕಾಲಾವಕಾಶ ಕೋರಿರುವುದನ್ನು ಉಲ್ಲೇಖಿಸಿ ಸಂದರ್ಶನಕಾರರು ಪ್ರಶ್ನಿಸಿದಾಗ, ಅಬ್ಬಾಸ್ ಅರಾಗ್ಚಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ, ಅಮೆರಿಕ ರಾಜತಾಂತ್ರಿಕತೆಗೆ ವಿಶ್ವಾಸ ದ್ರೋಹವೆಸಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.
“ಬಹುಶಃ ಅವರ ಮನಸ್ಸಿನಲ್ಲಿ ಈ ಯೋಜನೆಯಿರಬಹುದು ಹಾಗೂ ಈ ಯೋಜನೆಯನ್ನು ಬಚ್ಚಿಟ್ಟುಕೊಳ್ಳಲು ಅವರಿಗೆ ಸಂಧಾನ ಬೇಕಾಗಿರಬಹುದು. ನಾವು ಅವರನ್ನು ಇನ್ನು ಮುಂದೆ ಹೇಗೆ ನಂಬಬೇಕು ಎಂದು ತಿಳಿಯುತ್ತಿಲ್ಲ. ಅವರೇನು ಮಾಡಿದ್ದಾರೊ, ಅದು ರಾಜತಾಂತ್ರಿಕತೆಗೆ ಎಸಗಿದ ವಿಶ್ವಾಸ ದ್ರೋಹವಾಗಿದೆ” ಎಂದೂ ಅವರು ಕಟುವಾಗಿ ಆಪಾದಿಸಿದ್ದಾರೆ.
ಹೀಗಿದ್ದೂ, ಸಂಧಾನ ಪ್ರಕ್ರಿಯೆಗಳು ಮುಂದುವರಿಯುವುದರ ಬಗ್ಗೆ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿದ ಅವರು, ಆದರೆ, ಇರಾನ್ ಮೇಲಿನ ವಾಯು ದಾಳಿಯನ್ನು ಇಸ್ರೇಲ್ ಸ್ಥಗಿತಗೊಳಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಅಮೆರಿಕ ಹಾಗೂ ಇರಾನ್ ನಡುವೆ ಆರನೆಯ ಸುತ್ತಿನ ಸಂಧಾನ ಪ್ರಕ್ರಿಯೆಗಳು ಆರಂಭವಾಗುವುದಕ್ಕೆ ಎರಡು ದಿನಗಳ ಮುನ್ನ, ಅಮೆರಿಕದ ಕಟ್ಟಾ ಮೈತ್ರಿ ದೇಶವಾದ ಇಸ್ರೇಲ್, ಜೂನ್ 13ರಂದು ಇರಾನ್ ನ ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡು ಪೂರ್ವಭಾವಿ ವೈಮಾನಿಕ ದಾಳಿಗಳನ್ನು ನಡೆಸಿತ್ತು. ಆದರೆ, ಈ ಸೇನಾ ಕಾರ್ಯಾಚರಣೆಯಲ್ಲಿ ಅಮೆರಿಕ ಭಾಗಿಯಾಗಿಲ್ಲ ಎಂದು ಡೊನಾಲ್ಡ್ ಟ್ರಂಪ್ ಸರಕಾರದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ತದನಂತರ, ನನಗೆ ಈ ಯೋಜನೆಯ ಬಗ್ಗೆ ಮುಂಚಿತವಾಗಿಯೇ ತಿಳಿದಿತ್ತು ಎಂದು ಡೊನಾಲ್ಡ್ ಟ್ರಂಪ್ ಬಹಿರಂಗ ಪಡಿಸಿದ್ದರು. ಅಲ್ಲದೆ, ಇರಾನ್ ನ ಪರಮೋಚ್ಚ ನಾಯಕ ಅಯತೊಲ್ಲಾ ಖಾಮನೈ ಹತ್ಯೆಗೆ ಅವರು ಸಮ್ಮತಿ ಸೂಚಿಸಿದ್ದರು ಎಂದೂ ವರದಿಯಾಗಿತ್ತು.







