ಜಾರ್ಖಂಡ್ | ಐಆರ್ಬಿ ಯೋಧನ ಗುಂಡಿಕ್ಕಿ ಹತ್ಯೆ

PC - NDTV
ಬೊಕಾರೊ, ಅ. 28: ಕ್ಷುಲ್ಲಕ ಕಾರಣಕ್ಕೆ ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್ಬಿ) ಯೋಧನನ್ನು ವ್ಯಕ್ತಿಯೋರ್ವ ಗುಂಡಿಕ್ಕಿ ಹತ್ಯೆಗೈದ ಘಟನೆ ಜಾರ್ಖಂಡ್ನ ಬೊಕಾರೊ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಸೋಮವಾರ ಸಂಜೆ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಹತ್ಯೆಯಾದ ಯೋಧನನ್ನು ಅಜಯ್ ಯಾದವ್ (25) ಎಂದು ಗುರುತಿಸಲಾಗಿದೆ. ಅವರು ಚಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ಆದರ್ಶ್ ಕಾಲನಿಯ ಯದುವಂಶ್ ನಗರದ ನಿವಾಸಿ.
ಯಾದವ್ ಅವರನ್ನು ಗಿರಿಡಿಹ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು. ಚಾತ್ ಪೂಜೆಯ ರಜೆಯ ಹಿನ್ನೆಲೆಯಲ್ಲಿ ಅವರು ಚಾಸ್ನ ತನ್ನ ಊರಿಗೆ ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ವಿಷಯಗಳಿಗೆ ಸಂಬಂಧಿಸಿ ಯೋಧ ಹಾಗೂ ಬಲರಾಮ್ ತಿವಾರಿ ಎಂಬ ಯುವಕನ ನಡುವೆ ವಾಗ್ವಾದ ನಡೆಯಿತು. ಈ ಮಾತಿನ ಚಕಮಕಿ ಜಗಳಕ್ಕೆ ಕಾರಣವಾಯಿತು. ಆರಂಭದಲ್ಲಿ ಬಲರಾಮ ಅಲ್ಲಿಂದ ತೆರಳಿದ.
ಸ್ವಲ್ಪ ಸಮಯದ ನಂತರ ಆತ ಪಿಸ್ತೂಲ್ನೊಂದಿಗೆ ಹಿಂದಿರುಗಿದ ಹಾಗೂ ಯಾದವ್ ಅವರ ಮೇಲೆ ಗುಂಡು ಹಾರಿಸಿದ ಎಂದು ಚಾಸ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಯಾದವ್ ಅವರನ್ನು ಕೂಡಲೇ ಬೊಕಾರೊ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ಹೇಳಿದ್ದಾರೆ.
ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಹಾಗೂ ಆತನ ಸಹವರ್ತಿಯನ್ನು ಬಂಧಿಸಲು ಪೊಲೀಸರು ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.







