3 ಕೋಟಿ ಬಳಕೆದಾರ ಐಡಿಗಳನ್ನು ನಿಷ್ಕ್ರಿಯಗೊಳಿಸಿದ ಐಆರ್ಸಿಟಿಸಿ

Photo: x.com/IRCTCofficial
ಹೊಸದಿಲ್ಲಿ: ರೈಲು ಪ್ರಯಾಣಿಕರು ದೃಢೀಕೃತ ಟಿಕೆಟ್ ಕಾಯ್ದಿರಿಸುವಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಐಆರ್ಸಿಟಿಸಿ ಮೂರು ಕೋಟಿ ಸಂಶಯಾಸ್ಪದ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದೆ. ದುರ್ಬಳಕೆಯನ್ನು ತಡೆಯುವ ಸಲುವಾಗಿ ಆರು ಕೋಟಿ ಬಳಕೆದಾರರ ಐಡಿಗಳ ಕ್ರಮಬದ್ಧತೆಯನ್ನು ಮರುಪರಿಶೀಲಿಸಲು ಕ್ರಮ ಕೈಗೊಂಡಿದೆ.
ಭಾರತೀಯ ರೈಲ್ವೆಯ ಕೇಟರಿಂಗ್ ಮತ್ತು ಟಿಕೆಟಿಂಗ್ ಘಟಕ, ಆಹಾರದ ನೈರ್ಮಲ್ಯ ಮತ್ತು ಗುಣಮಟ್ಟದ ಬಗೆಗಿನ ದೂರುಗಳನ್ನು ನಿಭಾಯಿಸುವ ಸಲುವಾಗಿ ಎಐ-ಆಧರಿತ ಪಾಕಶಾಲೆ ಕಣ್ಗಾವಲು ವ್ಯವಸ್ಥೆಯನ್ನು ಇಡೀ ಜಾಲಕ್ಕೆ ವಿಸ್ತರಿಸಲು ಕೂಡಾ ನಿರ್ಧರಿಸಿದೆ. ಇದೀಗ 800ಕ್ಕೂ ಅಧಿಕ ಪಾಕಶಾಲೆಗಳ ಮೇಲೆ 2394 ಎಐ-ಆಧರಿತ ಕ್ಯಾಮೆರಾಗಳು ಕಣ್ಗಾವಲು ಇರಿಸಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ವ್ಯವಸ್ಥೆಯ ಮೂಲಕ ರೈಲ್ವೆ ಆಹಾರ ಅನೈರ್ಮಲ್ಯಕ್ಕೆ ಮುಖ್ಯವಾಗಿ ಕಾರಣವಾಗುವ ಒಂಬತ್ತು ಅಂಶಗಳನ್ನು ಪತ್ತೆ ಮಾಡಬಹುದಾಗಿದೆ. ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಹೆಡ್ಕ್ಯಾಪ್ ಕಡ್ಡಾಯವಾಗಿ ಧರಿಸುವುದು, ಪಾರದರ್ಶಕ ಕೈಗವಸುಗಳ ಬಳಕೆ, ಮಾಪಿಂಗ್, ವೈಪಿಂಗ್, ಇಲಿ/ಅಳಿಲು, ಕೀಟಗಳು ಮತ್ತು ಜಿರಲೆಗಳನ್ನು ಇದು ಪತ್ತೆ ಮಾಡುತ್ತದೆ.
ಸಂಶಯಾಸ್ಪದ ಟಿಕೆಟ್ ಬುಕ್ಕಿಂಗ್ ದಂಧೆಯ ವಿರುದ್ಧ ಕ್ರಮ ಕೈಗೊಂಡಿರುವ ಐಆರ್ಸಿಟಿಸಿ, 4.2 ಲಕ್ಷ ಸಂಶಯಾಸ್ಪದ ಪಿಎನ್ಆರ್ಗಳಿಗೆ ಸಂಬಂಧಿಸಿದಂತೆ 501 ದೂರುಗಳನ್ನು ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ನಲ್ಲಿ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಈ ವರ್ಷ 13,343 ಸಂಶಯಾಸ್ಪದ ಇ-ಮೇಲ್ ಐಡಿಗಳನ್ನು ಬ್ಲಾಕ್ ಮಾಡುವ ಮೂಲಕ ವಂಚನೆ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಿದ್ದಾರೆ.
ಎಐ-ಆಧರಿತ ಕಣ್ಗಾವಲು ಕ್ಯಾಮೆರಾಗಳು ಪುಟ್ಟ ಇರುವೆ (7-8 ಮಿಲಿಮೀಟರ್)ಯಷ್ಟು ಸಣ್ಣ ಕೀಟಗಳನ್ನು ಕೂಡಾ ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ. ನೈರ್ಮಲ್ಯಕ್ಕೆ ಸಂಬಂಧಿಸಿದ ಉಲ್ಲಂಘನೆಗಳಲ್ಲಿ ಪ್ರಮುಖವಾಗಿ ಹೆಡ್ಕ್ಯಾಪ್ಗಳನ್ನು ಬಳಸದಿರುವ ಪ್ರಕರಣಗಳು ಎಐ ವ್ಯವಸ್ಥೆಯಲ್ಲಿ ಹೆಚ್ಚಾಗಿ ಕಂಡುಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






