ಕೇರಳಂನಲ್ಲಿ ‘ಇಸ್ಲಾಂ ಸ್ನೇಹಿ ಜಿಮ್’ ವಿವಾದ: ಎಲ್ಲರಿಗೂ ಮುಕ್ತ ಎಂದು ಮಾಲಕರಿಂದ ಸ್ಪಷ್ಟನೆ

ಸಾಂದರ್ಭಿಕ ಚಿತ್ರ | indiatoday
ಪಾಲಕ್ಕಾಡ್ (ಕೇರಳಂ), ಜೂ. 4: ಕೇರಳದ ಪಾಲಕ್ಕಾಡ್ ಜಿಲ್ಲೆಯ ಪುತ್ತುನಗರಂನಲ್ಲಿರುವ ಫಿಟ್ನೆಸ್ ಕೇಂದ್ರವೊಂದನ್ನು ‘ಇಸ್ಲಾಂ ಸ್ನೇಹಿ ಜಿಮ್’ ಎಂದು ಪರಿಚಯಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಆದರೆ, ಈ ಜಿಮ್ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಮತ್ತು ಎಲ್ಲರಿಗೂ ಮುಕ್ತವಾಗಿದೆ ಎಂದು ಅದರ ಮಾಲಕ ನವಾಝ್ ಸ್ಪಷ್ಟಪಡಿಸಿದ್ದಾರೆ.
ಜಿಮ್ ನ ಪ್ರಚಾರ ವಿಡಿಯೊದಲ್ಲಿ ನವಾಝ್, ಜೋರಾದ ಸಂಗೀತವಿಲ್ಲದ ವಾತಾವರಣ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯಾಯಾಮ ಸಮಯ ಹಾಗೂ ಪ್ರತ್ಯೇಕ ಸ್ಥಳಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದರು. ತರಬೇತುದಾರರನ್ನೂ ಪ್ರತ್ಯೇಕವಾಗಿ ನಿಯೋಜಿಸಲಾಗುವುದು ಎಂದೂ ಅವರು ತಿಳಿಸಿದ್ದರು.
‘ಕೇರಳಂನಲ್ಲೇ ಮೊದಲ ಇಸ್ಲಾಂ ಸ್ನೇಹಿ ಜಿಮ್ ಆರಂಭಿಸುತ್ತಿದ್ದೇವೆ ಎಂದು ಭಾವಿಸುತ್ತೇನೆ. ಆಸಕ್ತರು ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಬಹುದು’ ಎಂದು ಅವರು ವೀಡಿಯೊದಲ್ಲಿ ಹೇಳಿದ್ದರು. ಇದೇ ವೇಳೆ, ಇದು ಹೊಸ ಉದ್ಯಮವಲ್ಲ; ಕಳೆದ ಸುಮಾರು 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜಿಮ್ ಆಗಿದ್ದು, ಪ್ರಸ್ತುತ ನವೀಕರಣ ಕಾರ್ಯ ನಡೆಯುತ್ತಿದೆ ಎಂದೂ ವಿವರಿಸಿದ್ದರು.
ಆದರೆ, ಈ ವೀಡಿಯೊ ವೈರಲ್ ಆದ ಬಳಿಕ ಜಿಮ್ ಮುಸ್ಲಿಮರಿಗಷ್ಟೇ ಮೀಸಲಾಗಿದೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದವು. ವ್ಯಾಪಕ ಟೀಕೆಯ ನಂತರ ಮೂಲ ವೀಡಿಯೊವನ್ನು ತೆಗೆದುಹಾಕಲಾಯಿತು.
ಬಳಿಕ ಬಿಡುಗಡೆ ಮಾಡಿದ ಮತ್ತೊಂದು ವೀಡಿಯೊದಲ್ಲಿ ನವಾಝ್, ‘ಇದು ಮುಸ್ಲಿಮರಿಗೆ ಮಾತ್ರ ಇರುವ ಜಿಮ್ ಎಂದು ನಾನು ಎಂದಿಗೂ ಹೇಳಿಲ್ಲ. ಎಲ್ಲ ಧರ್ಮದವರೂ ಇಲ್ಲಿ ಸದಸ್ಯತ್ವ ಪಡೆದುಕೊಳ್ಳಬಹುದು’ ಎಂದು ಸ್ಪಷ್ಟಪಡಿಸಿದರು.
‘ಇಸ್ಲಾಂ ಸ್ನೇಹಿ’ ಎಂಬ ಪದದ ಅರ್ಥವನ್ನು ವಿವರಿಸಿದ ಅವರು, ‘ಜೋರಾದ ಸಂಗೀತವಿಲ್ಲದೇ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ವ್ಯಾಯಾಮ ಮಾಡದಂತೆ ಪ್ರತ್ಯೇಕ ಸಮಯ ಹಾಗೂ ಪ್ರತ್ಯೇಕ ಸ್ಥಳದ ವ್ಯವಸ್ಥೆ ಸೇರಿದಂತೆ ಕೆಲವು ಕಾರ್ಯಾಚರಣಾ ವಿಧಾನಗಳನ್ನು ಸೂಚಿಸಲು ಈ ಪದ ಬಳಸಲಾಗಿದೆ’ ಎಂದರು.
‘ಇಸ್ಲಾಮಿಕ್ ತತ್ವಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಅನೇಕರು ಸಂಗೀತ ಕೇಳುವುದಿಲ್ಲ. ಮಿಶ್ರ ವ್ಯಾಯಾಮ ಸ್ಥಳಗಳಲ್ಲಿ ವ್ಯಾಯಾಮ ಮಾಡಲು ಕೆಲ ಮಹಿಳೆಯರಿಗೆ ಸರಿ ಎನಿಸುವುದಿಲ್ಲ. ಇಂತಹ ಕಾರಣಗಳಿಂದ ಅನೇಕರು ಜಿಮ್ ಗಳಿಂದ ದೂರ ಉಳಿದಿದ್ದಾರೆ. ಅವರಿಗೆ ಈ ಸೌಲಭ್ಯ ನೆರವಾಗಲಿದೆ’ ಎಂದು ಅವರು ಹೇಳಿದರು.
ತಮ್ಮ ಕುಟುಂಬ ಸದಸ್ಯರಲ್ಲಿಯೂ ಇದೇ ಕಾರಣಗಳಿಂದ ಜಿಮ್ ಗೆ ಹೋಗದವರಿದ್ದಾರೆ ಎಂದು ತಿಳಿಸಿದ ನವಾಝ್, ‘ನಾನು ಮುಸ್ಲಿಂ ಆಗಿರುವುದರಿಂದ ಇಂತಹ ಅನೇಕ ಜನರನ್ನು ವೈಯಕ್ತಿಕವಾಗಿ ಬಲ್ಲೆ. ಈ ಜಿಮ್ ಅವರಿಗೆ ಉಪಯುಕ್ತವಾಗಲಿದೆ’ ಎಂದರು.
ಸದಸ್ಯತ್ವಕ್ಕೆ ಯಾವುದೇ ಧಾರ್ಮಿಕ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ‘ಯಾರು ಬೇಕಾದರೂ ಬರಬಹುದು. ಜಿಮ್ ನಲ್ಲಿ ಮುಕ್ತವಾಗಿ ಸಂಗೀತ ಪ್ರಸಾರ ಇರುವುದಿಲ್ಲ. ಸಂಗೀತ ಕೇಳಲು ಬಯಸುವವರು ಹೆಡ್ ಫೋನ್ ಗಳ ಮೂಲಕ ಕೇಳಬಹುದು’ ಎಂದು ಹೇಳಿದರು.
ಮಾಲೀಕರ ಸ್ಪಷ್ಟೀಕರಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯಾಯಾಮ ಸೌಲಭ್ಯ ಕಲ್ಪಿಸಿರುವುದನ್ನು ಸ್ವಾಗತಿಸಿದ್ದಾರೆ.
‘ಇದು ಧರ್ಮಕ್ಕೆ ಸೀಮಿತವಾಗಬೇಕಿಲ್ಲ. ಅಪರಿಚಿತ ಪುರುಷರಿರುವಾಗ ವ್ಯಾಯಾಮ ಮಾಡಲು ಹಿಂಜರಿಯುವ ಮಹಿಳೆಯರಿಗೆ ಪ್ರತ್ಯೇಕ ಜಿಮ್ ವ್ಯವಸ್ಥೆ ಒಳ್ಳೆಯ ಆಲೋಚನೆ’ ಎಂದು ಒಬ್ಬ ಬಳಕೆದಾರ ಅಭಿಪ್ರಾಯಪಟ್ಟಿದ್ದಾರೆ.
‘ಸಾಮಾನ್ಯ ಜಿಮ್ ಗಳು ಎಂದಿನಂತೆ ಮುಂದುವರಿಯಲಿವೆ. ಈ ಮಾದರಿಯ ವ್ಯವಸ್ಥೆಯನ್ನು ಬಯಸುವವರು ಇಲ್ಲಿಗೆ ಬರಬಹುದು. ಅದರಲ್ಲಿ ತಪ್ಪೇನಿಲ್ಲ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು, ‘ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ ಅನೇಕ ಮುಸ್ಲಿಂ ಮಹಿಳೆಯರು ಜಿಮ್ ಗಳಿಗೆ ಹೋಗುವುದನ್ನು ತಪ್ಪಿಸುತ್ತಾರೆ. ಆ ವರ್ಗದ ಜನರನ್ನು ಆಕರ್ಷಿಸುವ ಉದ್ದೇಶದಿಂದ ಈ ಮಾದರಿಯನ್ನು ರೂಪಿಸಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.
ಆದರೆ, ‘ಇಸ್ಲಾಂ ಸ್ನೇಹಿ’ ಎಂಬ ಹೆಸರಿನ ವಿರುದ್ಧ ಟೀಕೆಗಳು ಮುಂದುವರಿದಿವೆ. ‘ಧರ್ಮದ ಆಧಾರದ ಮೇಲೆ ಪ್ರತ್ಯೇಕ ಗುರುತಿನ ಅಗತ್ಯವೇನು?’ ಎಂದು ಕೆಲವರು ಪ್ರಶ್ನಿಸಿದ್ದರೆ, ‘ಶೇ 100ರಷ್ಟು ಸಾಕ್ಷರತೆ ಹೊಂದಿರುವ ಸಮಾಜವು ಹಳೆಯ ಮನೋಭಾವಗಳಿಗೆ ಮರಳುತ್ತಿರುವಂತಿದೆ’ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.






