ಇಸ್ರೇಲ್- ಇರಾನ್ ಸಂಘರ್ಷ: ಭಾರತದ ಮೇಲೆ ಏನು ಪರಿಣಾಮ?

PC: PTI
ಹೊಸದಿಲ್ಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇರಾನ್ ನ ಜನಪ್ರಿಯ ನಿರೂಪಕಿ ಸುದ್ದಿ ಪ್ರಸಾರ ಮಾಡುತ್ತಿರುವ ವೇಳೆಯಲ್ಲೇ ಇರಾನ್ ನ ಟಿವಿ ಸ್ಟೇಷನ್ ಮೇಲೆ ಇಸ್ರೇಲ್ ದಾಳಿ ನಡೆಸಿರುವ ದೃಶ್ಯಾವಳಿಗಳು ಹರಿದಾಡುತ್ತಿವೆ.
ಭಾರತದ ಪಾಲಿಗೆ ಈ ಸಂಘರ್ಷ, ಸಂಕೀರ್ಣ ರಾಜತಾಂತ್ರಿಕ ಪ್ರಕರಣವಾಗಿದ್ದು, ಹಗ್ಗದ ಮೇಲಿನ ನಡಿಗೆ ಎನಿಸಿದೆ. ಭಾರತ ತನ್ನ ಪ್ರಮುಖ ಇಂಧನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ, ಪ್ರಾದೇಶಿಕ ಸಂಪರ್ಕ ಯೋಜನೆಗಳನ್ನು ಎತ್ತಿಹಿಡಿಯುವ ಮತ್ತು ತನ್ನ ಭದ್ರತಾ ಪಾಲುದಾರಿಕೆಯಲ್ಲಿ ಸಮತೋಲನ ಸಾಧಿಸುವ ಸವಾಲು ಭಾರತಕ್ಕಿದೆ.
ಈ ಯುದ್ಧ ಭಾರತದ ಮೇಲೆ ಪ್ರಮುಖ ಆರ್ಥಿಕ ಪರಿಣಾಮ ಬೀರಲಿದ್ದು, ಇಂಧನ ಭದ್ರತೆ ಮತ್ತು ವ್ಯಾಪಾರ ವೆಚ್ಚದ ಮೇಲೆ ಹೆಚ್ಚಿನ ಪರಿಣಾಮವಾಗಲಿದೆ. ಶೇಕಡ 80ರಷ್ಟು ಕಚ್ಚಾ ತೈಲ ಆಮದಿಗೆ ಭಾರತ ಪರ್ಶಿಯನ್ ಕೊಲ್ಲಿಯನ್ನು ಅವಲಂಬಿಸಿದೆ. ಬಹುತೇಕ ತೈಲ ಉತ್ಪನ್ನಗಳು ಇರಾನ್ ಗಡಿಯಲ್ಲಿರುವ ಹೊರ್ಮಝ್ ಕೊಲ್ಲಿಯ ಮೂಲಕಬರಬೇಕು. ಈ ಪ್ರದೇಶದಲ್ಲಿ ಸಂಚಾರಕ್ಕೆ ತಡೆ ಉಂಟಾದಲ್ಲಿ ತೈಲದ ಹರಿವು ವ್ಯತ್ಯಯವಾಗಲಿದ್ದು, ಜಾಗತಿಕವಾಗಿ ತೈಲ ಬೆಲೆ ಹೆಚ್ಚಿದೆ. ಇದು ಭಾರತದ ಆಮದು ಬಿಲ್ ಮೇಲೆ ನೇರ ಪರಿಣಾಮ ಬೀರುತ್ತದೆ.
ಉದಾಹರಣೆಗೆ 2019ರಲ್ಲಿ ಗಲ್ಫ್ ನಲ್ಲಿ ಟ್ಯಾಂಕರ್ ಬಿಕ್ಕಟ್ಟು ಸಂಭವಿಸಿದ ವೇಳೆ, ಹಡಗುಗಳ ವಿಮಾ ಕಂತು ಶೇಕಡ 20ರಷ್ಟು ಹೆಚ್ಚಿತ್ತು ಹಾಗೂ ಬೆಲೆ ಶೇಕಡ 4-5ರಷ್ಟು ಹೆಚ್ಚಿತ್ತು. ತೈಲ ಸಂಗ್ರಹ ದೃಷ್ಟಿಯಿಂದ ಭಾರತ ಹಾಗೂ ಇತರ ದೇಶಗಳು ದುಬಾರಿ ಪರ್ಯಾಯ ಮಾರ್ಗ ಅವಲಂಬಿಸಬೇಕಾಯಿತು.
ಇನ್ನೊಂದೆಡೆ ಇಸ್ರೇಲ್ ಜತೆಗಿನ ದ್ವಿಪಕ್ಷೀಯ ವ್ಯಾಪಾರ 2023ರಲ್ಲಿ 10.1 ಶತಕೋಟಿ ಡಾಲರ್ ಇದ್ದು, ರಕ್ಷಣೆ, ತಂತ್ರಜ್ಞಾನ, ಕರಷಿ ವಲಯದಲ್ಲಿ ಸಾಕಷ್ಟು ವಹಿವಾಟುಗಳು ನಡೆಯುತ್ತಿವೆ. ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿರುವುದರಿಂದ ಆ ದೇಶದ ಜತೆಗಿನ ವ್ಯವಹಾರ ಕುಸಿದಿದ್ದರೂ, ಒಣಹಣ್ಣುಗಳು, ರಸಗೊಬ್ಬರ ಮತ್ತು ಯೂರಿಯಾದಂಥ ಸರಕುಗಳ ಆಮದು ಮುಂದುವರಿದಿದೆ. ಪ್ರಸ್ತುತ ಅಸ್ಥಿರತೆಯಿಂದ ಆಮದು ಕುಸಿದು, ವಸ್ತುಗಳು ದುಬಾರಿಯಾಗಲಿವೆ.
ಜತೆಗೆ ಭಾರತ, ರಷ್ಯಾ ಮತ್ತು ಕೇಂದ್ರ ಏಷ್ಯಾ ದೇಶಗಳನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (ಐಎನ್ಎಸ್ ಟಿಸಿ), ಭದ್ರತಾ ಕಾರಣದಿಂದ ಮತ್ತು ಆರ್ಥಿಕ ದಿಗ್ಬಂಧನದ ಭೀತಿಯಿಂದ ವಿಳಂಬವಾಗುತ್ತಿದೆ. ಇದು ಚೀನಾ ಬೆಂಬಲಿತ ಮಾರ್ಗದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಭಾರತದ ಯೋಜನೆಗೆ ಮಾರಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.







