Flydubai ವಿಮಾನದಲ್ಲಿ 174 ಮಂದಿಯ ಜೀವ ಉಳಿಸಿದ ಭಾರತೀಯ ಪೈಲಟ್ ಮಚ್ಚಾರ್ ಗೆ ಇಸ್ರೇಲ್ ನ ಶೌರ್ಯ ಪ್ರಶಸ್ತಿ

Photo credit : ndtv
ಹೊಸದಿಲ್ಲಿ, ಅ. 9: ಫ್ಲೈದುಬೈ ವಿಮಾನದ ಕಾಕ್ ಪಿಟ್ ನಲ್ಲಿ ಸಹಪೈಲಟ್ ನಡೆಸಿದ ದಾಳಿಯನ್ನು ಎದುರಿಸಿ, 174 ಪ್ರಯಾಣಿಕರು ಮತ್ತು ಸಿಬ್ಬಂದಿಯ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಇಸ್ರೇಲ್ ನ ‘ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ತಿಳಿಸಿದ್ದಾರೆ.
ನಾಗರಿಕರಿಗೆ ನೀಡಲಾಗುವ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘Presidential Award for Civilian Heroism’ ಅನ್ನು ಮಚ್ಚಾರ್ ಅವರು ಚೇತರಿಸಿಕೊಂಡ ಬಳಿಕ ಪ್ರದಾನ ಮಾಡಲಾಗುವುದು. ಸದ್ಯ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಮಾನ್ ಪ್ರಜೆಯಾದ ಸಹಪೈಲಟ್ ಹಮಮ್ ಅಲ್-ಹಮಮಿ, ವಿಮಾನದ ಕಾಕ್ಪಿಟ್ ನಲ್ಲಿದ್ದ ತುರ್ತು ಬಳಕೆಯ ಕೊಡಲಿಯಿಂದ (ಕ್ರ್ಯಾಶ್ ಆಕ್ಸ್) ಮಚ್ಚಾರ್ ಅವರ ಮೇಲೆ ಹಲ್ಲೆ ನಡೆಸಿದ್ದ. ದಾಳಿಯಲ್ಲಿ ಮಚ್ಚಾರ್ ಗಂಭೀರವಾಗಿ ಗಾಯಗೊಂಡು ವಿಪರೀತ ರಕ್ತಸ್ರಾವವಾಗಿತ್ತು. ಆದರೂ ಅವರು ಕಾಕ್ಪಿಟ್ ನ ಬಾಗಿಲು ತೆರೆದರು. ಇದರಿಂದ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕರು ಕಾಕ್ಪಿಟ್ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.
‘ಇಂದು ನಾವು ಗೌರವಿಸುತ್ತಿರುವ ಇಸ್ರೇಲಿ ವೀರರ ಜೊತೆಗೆ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಸಂಪೂರ್ಣವಾಗಿ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ಅವರ ಅಪ್ರತಿಮ ಧೈರ್ಯ ಮತ್ತು ವೃತ್ತಿಪರತೆ ದೊಡ್ಡ ದುರಂತವೊಂದನ್ನು ತಪ್ಪಿಸಲು ನೆರವಾಗಿದೆ. ಅವರು ಚೇತರಿಸಿಕೊಂಡ ಬಳಿಕ ಇಸ್ರೇಲ್ ಜನರ ಪರವಾಗಿ ಅವರಿಗೆ ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ ಪ್ರದಾನ ಮಾಡುವುದು ನನಗೆ ಹೆಮ್ಮೆಯ ವಿಷಯವಾಗಲಿದೆ’ ಎಂದು ಹರ್ಜೋಗ್ ಹೇಳಿದ್ದಾರೆ.
ಇಸ್ರೇಲಿ ಗುಪ್ತಚರ ಮೂಲಗಳ ವರದಿಯ ಪ್ರಕಾರ, ಸಹಪೈಲಟ್ ಹಮಮಿ ವಿಮಾನದ ನಿಯಂತ್ರಣವನ್ನು ತೆಗೆದುಕೊಂಡು, ಅದನ್ನು ಟೆಲ್ ಅವೀವ್ಗೆ ಹಾರಿಸಿ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆಸುವ ಯೋಜನೆ ಹೊಂದಿದ್ದ ಎನ್ನಲಾಗಿದೆ. ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯದಿಂದ ಈ ಯೋಜನೆ ವಿಫಲವಾಯಿತು ಎಂದು ವರದಿ ತಿಳಿಸಿದೆ.
ಬಳಿಕ ಹಮಮಿ ವಿಮಾನವನ್ನು ಮರುಭೂಮಿಗೆ ಅಪ್ಪಳಿಸುವಂತೆ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿರದ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇತರ ಪೈಲಟ್ ಗಳು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸೌದಿ ಅರೇಬಿಯದಲ್ಲಿ ಸುರಕ್ಷಿತವಾಗಿ ಇಳಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಮಚ್ಚಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.
ಫ್ಲೈದುಬೈ ವಿಮಾನದ ಸಹಪೈಲಟ್ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮತ್ತು ವಿಮಾನ ಅಪಘಾತಕ್ಕೀಡಾಗುವುದನ್ನು ತಡೆಯಲು ನೆರವಾದ ಐವರು ಇಸ್ರೇಲಿಗಳಿಗೆ ಹರ್ಜೋಗ್ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.
‘ಇತರರನ್ನು ರಕ್ಷಿಸಲು ನೀವು ನಿಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದೀರಿ. ಭೀಕರ ದುರಂತವೊಂದನ್ನು ತಡೆಗಟ್ಟಿದ್ದೀರಿ. ಇಂದು ಇಡೀ ಜಗತ್ತು ಇಸ್ರೇಲಿ ಸಮಾಜದ ಸುಂದರ ಮತ್ತು ಧೈರ್ಯಶಾಲಿ ಮುಖವನ್ನು ಕಂಡಿದೆ’ ಎಂದು ಅವರು ಕಳೆದ ವಾರ ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯಾಪ್ಟನ್ ಮಚ್ಚಾರ್ ಅವರ ಸಾಹಸವನ್ನು ಶ್ಲಾಘಿಸಿದ್ದಾರೆ.
ಚೇತರಿಸಿಕೊಳ್ಳುತ್ತಿರುವ ಪೈಲಟ್ :
ಮಚ್ಚಾರ್ ಅವರಿಗೆ ಚಿಕಿತ್ಸೆ ನೀಡಿದ ದಂತ ವೈದ್ಯರು, ಅವರಿಗೆ ವಿಪರೀತ ರಕ್ತಸ್ರಾವವಾಗಿತ್ತು ಮತ್ತು ನಾಡಿಬಡಿತ ಕಡಿಮೆಯಾಗಿತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ. ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಆಸ್ಪತ್ರೆಯಲ್ಲಿ ಹತ್ತು ಹೆಜ್ಜೆ ನಡೆದಿರುವ ಮಚ್ಚಾರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.






