ಮಾಜಿ ಶಾಸಕರ ಪಿಂಚಣಿಗೆ ಮತ್ತೆ ಅರ್ಜಿ ಸಲ್ಲಿಸಿದ ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್!

ಜಗದೀಪ್ ಧನಕರ್ | PC : PTI
ಹೊಸದಿಲ್ಲಿ: ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ರಾಜಸ್ಥಾನದ ಮಾಜಿ ಶಾಸಕರ ಪಿಂಚಣಿಗಾಗಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1993ರಿಂದ 1998ರವರೆಗೆ ರಾಜಸ್ಥಾನದ ಕಿಶನ್ ಗಢ್ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕರಾಗಿ ಪ್ರತಿನಿಧಿಸಿದ್ದ ಜಗದೀಪ್ ಧನಕರ್, 2019ರವರೆಗೆ ಮಾಜಿ ಶಾಸಕರ ಪಿಂಚಣಿಯನ್ನು ಸ್ವೀಕರಿಸಿದ್ದರು. ಆದರೆ, ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡ ನಂತರ, ಈ ಪಿಂಚಣಿ ಸ್ಥಗಿತಗೊಂಡಿತ್ತು.
ತಮ್ಮ ಆರೋಗ್ಯ ಸಮಸ್ಯೆಯನ್ನು ಮುಂದುಮಾಡಿ ಜುಲೈ 21ರಂದು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಜಗದೀಪ್ ಧನಕರ್, ನನಗೆ ಮಾಜಿ ಶಾಸಕರ ಪಿಂಚಣಿಯನ್ನು ಪುನಾರಂಭಿಸಬೇಕು ಎಂದು ರಾಜಸ್ಥಾನ ವಿಧಾನಸಭಾ ಕಾರ್ಯಾಲಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ವಿಧಾನಸಭಾ ಕಾರ್ಯಾಲಯ ಕಾರ್ಯಪ್ರವೃತ್ತವಾಗಿದ್ದು, ಜಗದೀಪ್ ಧನಕರ್ ಅವರು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದಾಗಿನಿಂದ ಅವರು ಮಾಜಿ ಶಾಸಕರ ಪಿಂಚಣಿಗೆ ಅರ್ಹರಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಒಂದು ಬಾರಿ ಶಾಸಕರಾಗಿರುವವರಿಗೆ ಮಾಸಿಕ 35,000 ರೂ.ನೊಂದಿಗೆ ಪಿಂಚಣಿ ಪ್ರಾರಂಭಗೊಳ್ಳಲಿದ್ದು, ಹೆಚ್ಚುವರಿ ಅವಧಿ ಹಾಗೂ ವಯಸ್ಸಿಗೆ ಅನುಗುಣವಾಗಿ ಈ ಮೊತ್ತ ಏರಿಕೆಯಾಗುತ್ತದೆ. 70 ವರ್ಷಕ್ಕೆ ಮೇಲ್ಪಟ್ಟ ಮಾಜಿ ಶಾಸಕರಿಗೆ ಶೇ. 20ರಷ್ಟು ಹೆಚ್ಚುವರಿ ಪಿಂಚಣಿ ದೊರೆಯುತ್ತದೆ.
ಸದ್ಯ ಜಗದೀಪ್ ಧನಕರ್ 74 ವರ್ಷ ವಯಸ್ಸಿನವರಾಗಿದ್ದು, ಮಾಜಿ ಶಾಸಕರಾಗಿ ಅವರು ಮಾಸಿಕ 42,000 ರೂ. ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







